ತೀವ್ರ ಬೇಸಿಗೆಗೆ ತುತ್ತಾಗಲಿರುವ ಭಾರತ: ಎಪ್ರಿಲ್ ನಿಂದ ಜೂನ್ ನಡುವೆ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಲಿನ ಮುನ್ಸೂಚನೆ ನೀಡಿದ ಐಎಂಡಿ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಎಪ್ರಿಲ್-ಜೂನ್ ತಿಂಗಳ ನಡುವೆ ಭಾರತ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನವನ್ನು ಹೊಂದಿರಲಿದ್ದು, ಕೇಂದ್ರ ಮತ್ತು ಪೂರ್ವ ಭಾರತ ಹಾಗೂ ವಾಯುವ್ಯ ಭಾರತದ ಸಮತಟ್ಟು ಪ್ರದೇಶಗಳು ಅಧಿಕ ಪ್ರಮಾಣದ ಬಿಸಿ ಮಾರುತದ ದಿನಗಳನ್ನೂ ಒಳಗೊಂಡಿರಲಿವೆ ಎಂದು ಸೋಮವಾರ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪಶ್ಚಿಮ ಮತ್ತು ಪೂರ್ವ ಭಾರತದ ಕೆಲವು ಪ್ರದೇಶಗಳಲ್ಲಿ ಮಾತ್ರ ಸಾಮಾನ್ಯ ತಾಪಮಾನವಿರಲಿದೆ ಎಂದು ನಿರೀಕ್ಷಿಸಲಾಗಿದ್ದು, ಉಳಿದಂತೆ ದೇಶದ ಬಹು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಅಧಿಕ ಪ್ರಮಾಣದ ಗರಿಷ್ಠ ತಾಪಮಾನವಿರಲಿದೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
ದೇಶದ ಬಹುತೇಕ ಪ್ರಾಂತ್ಯಗಳಲ್ಲಿ ಕನಿಷ್ಠ ತಾಪಮಾನ ಕೂಡಾ ಸಾಮಾನ್ಯಕ್ಕಿಂತ ಅಧಿಕವಾಗಿರಲಿದೆ ಎಂದು ಅನ್ ಲೈನ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ ಹೇಳಿದರು.
“ಎಪ್ರಿಲ್ ನಿಂದ ಜೂನ್ ತಿಂಗಳವರೆಗೆ ಉತ್ತರ ಮತ್ತು ಪೂರ್ವ ಭಾರತ, ಕೇಂದ್ರ ಭಾರತ ಬಹುತೇಕ ಭಾಗಗಳು ಹಾಗೂ ವಾಯುವ್ಯ ಭಾರತದ ಸಮತಟ್ಟು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಎರಡರಿಂದ ನಾಲ್ಕು ದಿನಗಳ ಅಧಿಕ ಕಾಲ ಉಷ್ಣ ಮಾರುತ ಬೀಸಲಿದೆ ಎಂದು ನಿರೀಕ್ಷಿಸಲಾಗಿದೆ” ಎಂದು ಅವರು ತಿಳಿಸಿದರು.
ಸಾಮಾನ್ಯವಾಗಿ ಭಾರತದಲ್ಲಿ ಎಪ್ರಿಲ್ ನಿಂದ ಜೂನ್ ವರೆಗೆ ನಾಲ್ಕರಿಂದ ಏಳು ದಿನಗಳ ಕಾಲ ಉಷ್ಣ ಮಾರುತ ದಾಖಲಾಗುತ್ತದೆ.
ಇದಕ್ಕೂ ಮುನ್ನ, ವಾಯುವ್ಯ ಭಾರತದಲ್ಲಿ ಬೇಸಿಗೆಯಲ್ಲಿನ ಉಷ್ಣ ಮಾರುತಗಳ ಸಂಖ್ಯೆ ದುಪಟ್ಟಾಗುವ ಸಾಧ್ಯತೆ ಇದೆ ಎಂದೂ ಅವರು ಹೇಳಿದರು.
ರಾಜಸ್ಥಾನ, ಗುಜರಾತ್, ಹರ್ಯಾಣ, ಪಂಜಾಬ್, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್ ಗಢ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣ ಮಾರುತ ದಿನಗಳ ಅನುಭವವಾಗಲಿದೆ ಎಂದು ಅಂದಾಜಿಸಲಾಗಿದೆ.
ಎಪ್ರಿಲ್ ತಿಂಗಳಲ್ಲಿ ಭಾರತದ ಬಹುತೇಕ ಭಾಗಗಳು ಸಾಮಾನ್ಯಕ್ಕಿಂತ ಅಧಿಕ ಗರಿಷ್ಠ ತಾಪಮಾನಕ್ಕೆ ಸಾಕ್ಷಿಯಾಗಲಿವೆ. ಆದರೆ, ದಕ್ಷಿಣ ರಾಜ್ಯಗಳ ತುದಿ ಭಾಗಗಳು ಹಾಗೂ ವಾಯುವ್ಯ ಭಾರತದ ಪ್ರಾಂತ್ಯಗಳಲ್ಲಿ ಸಾಮಾನ್ಯ ತಾಪಮಾನ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ತಾಪಮಾನ ಸಾಮಾನ್ಯವಾಗಿರುವ ಅಥವಾ ಸಾಮಾನ್ಯಕ್ಕಿಂತ ಕಡಿಮೆ ಇರುವ ವಾಯುವ್ಯ ಭಾರತ ಹಾಗೂ ಈಶಾನ್ಯ ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ದೇಶದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಅಧಿಕವಾಗಿರಲಿದೆ ಎಂದು ಮೊಹಾಪಾತ್ರ ತಿಳಿಸಿದರು.
ದೇಶವು ಅಧಿಕ ಪ್ರಮಾಣದ ಉಷ್ಣ ಮಾರುತಗಳನ್ನು ಅನುಭವಿಸುವ ನಿರೀಕ್ಷೆ ಇರುವುದರಿಂದ, ಈ ಬಾರಿಯ ಬೇಸಿಗೆ ಋತುವಿನಲ್ಲಿ ಶೇ. 9ರಿಂದ 10ರಷ್ಟು ಹೆಚ್ಚಳಗೊಳ್ಳಲಿರುವ ವಿದ್ಯುತ್ ಬೇಡಿಕೆಯನ್ನು ನಿಭಾಯಿಸಲು ಭಾರತ ಸಿದ್ಧವಾಗಿರಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.
ಕಳೆದ ವರ್ಷದ ಮೇ 30ರಂದು ಭಾರತದಾದ್ಯಂತದ ಗರಿಷ್ಠ ವಿದ್ಯುತ್ ಬೇಡಿಕೆಯ ಪ್ರಮಾಣ 250 ಗೀಗಾವ್ಯಾಟ್ ಗಡಿ ದಾಟಿತ್ತು. ಇದು ಅಂದಾಜಿಸಿದ್ದಕ್ಕಿಂತ ಶೇ. 6.3ರಷ್ಟು ಅಧಿಕವಾಗಿತ್ತು ಎಂದು ಹೇಳಲಾಗಿದೆ.
ವಿದ್ಯುತ್ ಬೇಡಿಕೆಯ ಪ್ರಮಾಣ ಹೆಚ್ಚಳವಾಗಲು ಹವಾಮಾನ ಬದಲಾವಣೆ ಪ್ರೇರಿತ ಶಾಖದ ಒತ್ತಡ ಒಂದು ಪ್ರಮುಖ ಕಾರಣವಾಗಿದೆ.