ಅಮೆರಿಕ ರಾಯಭಾರಿ ಕಚೇರಿಯಿಂದ 2 ಸಾವಿರ ವೀಸಾ ಸಂದರ್ಶನ ರದ್ದು

ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ಅನ್ಲೈನ್ನಲ್ಲಿ ಮಾನವ ಚಟುವಟಿಕೆಗಳನ್ನು ಅನುಕರಿಸುವ ಸಾಮರ್ಥ್ಯ ಹೊಂದಿರುವ ಸಾಫ್ಟ್ವೇರ್ ಅಪ್ಲಿಕೇಶನ್ಗಳ ಮೂಲಕ ಮಾಡಲಾದ 2 ಸಾವಿರ ವೀಸಾ ಸಂದರ್ಶನ (ಅಪಾಯಿಂಟ್ಮೆಂಟ್)ಗಳನ್ನು ಭಾರತದಲ್ಲಿ ಅಮೆರಿಕ ರಾಯಭಾರಿ ಕಚೇರಿ ಬುಧವಾರ ರದ್ದುಪಡಿಸಿದೆ.
‘‘ ನಮ್ಮ ವೀಸಾ ನೀಡಿಕೆ ವೇಳಾಪಟ್ಟಿಯ ನೀತಿಗಳನ್ನು ಉಲ್ಲಂಘಿಸುವ ಏಜೆಂಟರು ಹಾಗೂ ಫಿಕ್ಸರ್ಗಳ ಬಗ್ಗೆ ನಾವು ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ’’ ಎಂದು ಅಮೆರಿಕ ರಾಯಭಾರಿ ಕಚೇರಿಯು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ವಂಚನೆಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳನ್ನು ನಾವು ಮುಂದುವರಿಸಲಿದ್ದೇವೆ ಎಂದು ಅಮೆರಿಕ ರಾಯಭಾರಿ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಮೆರಿಕ ರಾಯಭಾರಿ ಕಚೇರಿಯು ನೀಡಿದ ದೂರನ್ನು ಆಧರಿಸಿ ವಂಚನೆಯ ಕೃತ್ಯಗಳಲ್ಲಿ ತೊಡಗಿದ್ದ ಆರೋಪದಲ್ಲಿ ಹಲವಾರು ವೀಸಾ ಹಾಗೂ ಪಾಸ್ಪೋರ್ಟ್ ಏಜೆಂಟರುಗಳ ವಿರುದ್ಧ ದಿಲ್ಲಿ ಪೊಲೀಸ್ ಕ್ರೈಂ ಬ್ರಾಂಚ್ ಮೊಕದ್ದಮೆ ದಾಖಲಿಸಿದ ಒಂದು ತಿಂಗಳ ಬಳಿಕ ಈ ಬೆಳವಣಿಗೆಯಾಗಿದೆ. ಈ ಏಜೆಂಟರುಗಳ ಪೈಕಿ ಹೆಚ್ಚಿನವರು ಪಂಜಾಬ್ ಹಾಗೂ ಹರ್ಯಾಣ ರಾಜ್ಯದವರೆಂದು ತಿಳಿದುಬಂದಿದೆ.
ಮೋಸ ಹಾಗೂ ವಂಚನೆಗೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳಡಿ ಹಾಗೂ ಮಾಹಿತಿ ತಂತ್ರಜ್ಞಾನದ ನಿಯಮಗಳಡಿ ಫೆಬ್ರವರಿ 27ರಂದು ಪ್ರಕರಣ ದಾಖಲಾಗಿತ್ತು.
ಪಾಸ್ಪೋರ್ಟ್ ಹಾಗೂ ವೀಸಾ ಏಜೆಂಟರುಗಳು ವೀಸಾ ಅರ್ಜಿಗಳಲ್ಲಿ ಸುಳ್ಳು ಮಾಹಿತಿಗಳನ್ನು ಸಲ್ಲಿಸುತ್ತಿದ್ದರು ಹಾಗೂ ಅರ್ಜಿದಾರರಿಗೆ ನಕಲಿ ದಾಖಲೆಗಳನ್ನು ಒದಗಿಸುತ್ತಿದ್ದ ನೀಡುತ್ತಿದ್ದರು’’ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.