ನರೇಗಾ ಕಾರ್ಮಿಕರ ನಿರ್ಲಕ್ಷ್ಯದ ವಿರುದ್ಧ ಕೇರಳದ ಸಂಸದರಿಂದ ಸಂಸತ್ ಆವರಣದಲ್ಲಿ ಪ್ರತಿಭಟನೆ; ಪ್ರಿಯಾಂಕಾ, ರಾಹುಲ್ ಭಾಗಿ

PC : PTI
ಹೊಸದಿಲ್ಲಿ: ನರೇಗಾ ಕಾರ್ಮಿಕರ ನಿರ್ಲಕ್ಷ್ಯ ಆರೋಪಿಸಿ ಹಾಗೂ ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ನಿಭಾಯಿಸಲು ಅವರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಹುಲ್ ಗಾಂಧಿ ಅವರೊಂದಿಗೆ ಕೇರಳದ ಸಂಸದರು ಸಂಸತ್ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್‌ನ ವಯನಾಡ್‌ನ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ, ಸರಕಾರದ ನಿಷ್ಕ್ರಿಯತೆ ಲಕ್ಷಾಂತರ ಕುಟುಂಬಗಳು ಜೀವನೋಪಾಯವಿಲ್ಲದಂತೆ ಹಾಗೂ ಬಡತನ, ಸಂಕಷ್ಟ ಉಲ್ಬಣಗೊಳ್ಳುವಂತೆ ಮಾಡಿದೆ ಎಂದಿದ್ದಾರೆ.
‘‘ಈ ಬಿಕ್ಕಟ್ಟಿನ ಕುರಿತು ಕೂಡಲೇ ಗಮನ ಹರಿಸುವಂತೆ ಹಾಗೂ ದೀರ್ಘಕಾಲದ ವೇತನ ಬಾಕಿಯಿಂದ ಜೀವನ ನಿರ್ವಹಿಸಲು ಕಷ್ಟಪಡುತ್ತಿರುವ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ನಾವು ಆಗ್ರಹಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ.
ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡುವ, ಹೆಚ್ಚುತ್ತಿರುವ ಬೆಲೆ ಏರಿಕೆಯನ್ನು ನಿಭಾಯಿಸಲು ವೇತನ ಹೆಚ್ಚಿಸುವ, ಕೆಲಸದ ದಿನಗಳನ್ನು 150 ದಿನಗಳಿಗೆ ಹೆಚ್ಚಿಸುವ ಖಾತರಿಯನ್ನು ಸರಕಾರ ನೀಡಬೇಕು ಎಂದು ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ, ರಾಹುಲ್ ಗಾಂಧಿ ಅವರಲ್ಲದೆ, ಕಾಂಗ್ರೆಸ್‌ನ ಹಿರಿಯ ನಾಯಕರಾದ ಕೆ.ಸಿ. ವೇಣುಗೋಪಾಲ್, ಶಶಿ ತರೂರ್ ಹಾಗೂ ಪಕ್ಷದ ಕೇರಳದ ಇತರ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.