ಕರ್ಣಿ ಸೇನೆಯಿಂದ ಎಸ್ಪಿ ಸಂಸದ ರಾಮ್ಜಿ ಲಾಲ್ ಸುಮನ್ ರ ಆಗ್ರಾ ನಿವಾಸದ ಮೇಲೆ ದಾಳಿ

Update: 2025-03-26 20:14 IST
ಕರ್ಣಿ ಸೇನೆಯಿಂದ ಎಸ್ಪಿ ಸಂಸದ ರಾಮ್ಜಿ ಲಾಲ್ ಸುಮನ್ ರ ಆಗ್ರಾ ನಿವಾಸದ ಮೇಲೆ ದಾಳಿ

 Credit: X/Sajidali_Journo

  • whatsapp icon

ಆಗ್ರಾ: ಬಲಪಂಥೀಯ ಸಂಘಟನೆಯಾದ ಕರ್ಣಿ ಸೇನೆಯ ಕಾರ್ಯಕರ್ತರು ಆಗ್ರಾದಲ್ಲಿರುವ ಸಮಾಜವಾದಿ ಪಕ್ಷದ ಸಂಸದ ರಾಮ್ಜಿ ಲಾಲ್ ಸುಮನ್ ರ ನಿವಾಸದ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ ಎಂದು ಅವರ ಪುತ್ರ ಆರೋಪಿಸಿದ್ದಾರೆ.

ಆಗ್ರಾದಲ್ಲಿನ ಹರಿಪರ್ವತ್ ಚೌರಾಹಾ ಬಳಿ ಇರುವ ಸಂಸದ ರಾಮ್ಜಿ ಲಾಲ್ ಸುಮನ್ ರ ನಿವಾಸವನ್ನು ಹತ್ತಾರು ಕರ್ಣಿ ಸೇನೆ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ. ಈ ದಾಳಿಯಲ್ಲಿ ಹಲವು ಕಾರುಗಳಿಗೆ ಹಾನಿಯಾಗಿದ್ದು, ಕುರ್ಚಿಗಳು ಮುರಿದಿವೆ ಹಾಗೂ ಕಿಟಕಿಯ ಗಾಜುಗಳನ್ನು ಪುಡಿಪುಡಿಯನ್ನಾಗಿಸಲಾಗಿದೆ ಎಂದು ವರದಿಯಾಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಸಂಸದ ರಾಮ್ಜಿ ಲಾಲ್ ಸುಮನ್ ರ ಪುತ್ರ ರಂಜಿತ್ ಸುಮನ್, “ಹಲವಾರು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನಾತ್ಮಕ ಭಾಷೆಯನ್ನು ಬಳಸಲಾಗುತ್ತಿತ್ತು ಹಾಗೂ ಬೆದರಿಕೆಗಳನ್ನು ಒಡ್ಡಲಾಗುತ್ತಿತ್ತು. ಕಳೆದೆರಡು ದಿನಗಳಿಂದ ಮನೆಯನ್ನು ಸುತ್ತುವರಿಯುವ ಕುರಿತು ಮಾತುಕತೆಗಳು ನಡೆದಿದ್ದವು” ಎಂದು ಆರೋಪಿಸಿದ್ದಾರೆ.

“ಪೊಲೀಸರಿಗೆ ಈ ಕುರಿತು ತಿಳಿದಿದ್ದರೂ, ಯಾವುದೇ ಕ್ರಮವನ್ನು ಜರುಗಿಸಿಲ್ಲ. ಬದಲಿಗೆ ದಾಳಿಕೋರರ ಗುಂಪಿಗೆ ಕುಮ್ಮಕ್ಕು ನೀಡಲಾಗಿದ್ದು, ಅವರು ದೊಣ್ಣೆಗಳು, ಸಲಾಕೆಗಳು ಹಾಗೂ ಖಡ್ಗಗಳೊಂದಿಗೆ ದಾಳಿ ನಡೆಸಿದ್ದಾರೆ” ಎಂದೂ ಅವರು ದೂರಿದ್ದಾರೆ.

ಆದರೆ, ಈ ಘಟನೆಯ ಕುರಿತು ಪೊಲೀಸ್ ಅಧಿಕಾರಿಗಳು ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ವಿಡಿಯೊವೊಂದರಲ್ಲಿ ರಾಣಾ ಸಂಗರನ್ನು ವಿಶ್ವಾಸ ದ್ರೋಹಿ ಎಂದು ಟೀಕಿಸಿದ್ದ ರಾಜ್ಯಸಭಾ ಸಂಸದರಾದ ರಾಮ್ಜಿ ಲಾಲ್ ಸುಮನ್, ಇಬ್ರಾಹಿಂ ಲೋಧಿಯನ್ನು ಪರಾಭವಗೊಳಿಸಲು ಅವರು ಬಾಬರ್ ನನ್ನು ಕರೆ ತಂದಿದ್ದರು ಎಂದು ಆರೋಪಿಸಿದ್ದರು.

ರಾಣಾ ಸಂಗ ಅಥವಾ ಒಂದನೇ ಸಂಗ್ರಾಮ್ ಸಿಂಗ್ 1508ರಿಂದ 1528ರವರೆಗೆ ಮೇವಾಡ್ ನ ರಾಜರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News