ಪಕ್ಷದ ಶಿಸ್ತು ಉಲ್ಲಂಘನೆ: ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ 6 ವರ್ಷ ಉಚ್ಚಾಟನೆ

ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡುತ್ತಿದ್ದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೊನೆಗೂ ಬಿಜೆಪಿ ಹೈಕಮಾಂಡ್ ಶಿಸ್ತು ಕ್ರಮ ಕೈಗೊಂಡು, ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ.
ಆ ಮೂಲಕ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿದ್ದ ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಬಣ ರಾಜಕೀಯಕ್ಕೆ ಅಂಕುಶ ಹಾಕುವಲ್ಲಿ ಬಿಜೆಪಿ ಹೈಕಮಾಂಡ್ ಸದ್ಯದ ಮಟ್ಟಿಗೆ ಯಶಸ್ವಿಯಾಗಿದೆ. ಬಿಜೆಪಿ ಶಿಸ್ತು ಸಮಿತಿ ಎರಡು ಬಾರಿ ಶೋಕಾಸ್ ನೋಟಿಸ್ ನೀಡಿದ್ದರೂ ಅದಕ್ಕೆ ತಲೆ ಕೆಡಿಸಿಕೊಳ್ಳದ ಯತ್ನಾಳ್, ಪದೇ ಪದೇ ವಿಜಯೇಂದ್ರ ವಿರುದ್ಧ ತಮ್ಮ ಬಹಿರಂಗ ವಾಗ್ದಾಳಿಯನ್ನು ಮುಂದುವರೆಸುವ ಮೂಲಕ ಶಿಸ್ತು ಸಮಿತಿಯ ಸೂಚನೆಯನ್ನು ಉಲ್ಲಂಘಿಸಿದ್ದರು.
ಉಚ್ಛಾಟನೆ ಆದೇಶದಲ್ಲೇನಿದೆ?: ‘2025ರ ಫೆ.10ರಂದು ಪಕ್ಷದ ಕೇಂದ್ರ ಶಿಸ್ತು ಸಮಿತಿಯು ನೀಡಿದ್ದ ಶೋಕಾಸ್ ನೋಟಿಸ್‍ಗೆ ನೀವು ನೀಡಿರುವ ಪ್ರತಿಕ್ರಿಯೆಯನ್ನು ಪರಿಗಣಿಸಿದೆ. ಅಲ್ಲದೇ, ಈ ಹಿಂದಿನ ಶೋಕಾಸ್ ನೋಟಿಸ್‍ಗಳಿಗೆ ಪ್ರತಿಕ್ರಿಯೆಯಾಗಿ ಉತ್ತಮ ನಡವಳಿಕೆಯ ಭರವಸೆಗಳನ್ನು ನೀಡಿದ್ದರೂ ಸಹ, ನೀವು ಪಕ್ಷದ ಶಿಸ್ತನ್ನು ಪದೇ ಪದೇ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಆದುದರಿಂದ, ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಅವಧಿಗೆ ಉಚ್ಚಾಟಿಸಲು ನಿರ್ಧರಿಸಲಾಗಿದೆ. ಹಾಗೇ ನೀವು ಇಲ್ಲಿಯವರೆಗೆ ಹೊಂದಿದ್ದ ಪಕ್ಷದ ಹುದ್ದೆಗಳಿಂದಲೂ ನಿಮ್ಮನ್ನು ವಜಾಗೊಳಿಸಲಾಗಿದೆ’ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಹಿಂದೆಯೂ ಉಚ್ಛಾಟನೆಗೊಂಡಿದ್ದ ಯತ್ನಾಳ್
2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಡಿ.ವಿ.ಸದಾನಂದಗೌಡ ವಿರುದ್ಧ ಹೇಳಿಕೆಗಳನ್ನು ನೀಡಿದ ಪರಿಣಾಮ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಆ ನಂತರ, 2013ರಲ್ಲಿ ಬಿಜಾಪುರ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡಿದ್ದರು. ಯಡಿಯೂರಪ್ಪ ಬಿಜೆಪಿಗೆ ರಾಜೀನಾಮೆ ನೀಡಿ ಕೆಜೆಪಿ ಕಟ್ಟಿದಾಗ, ಯತ್ನಾಳ್ ಮೇಲೆ ವಿಧಿಸಿದ್ದ ಉಚ್ಛಾಟನೆ ಆದೇಶವನ್ನು ಹಿಂಪಡೆದು ಪಕ್ಷಕ್ಕೆ ಕರೆತರಲಾಗಿತ್ತು.
2016ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಸಿಗದ ಕಾರಣ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಯತ್ನಾಳ್ ಗೆಲುವು ಸಾಧಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅವರನ್ನು ಪುನಃ ಬಿಜೆಪಿಯಿಂದ 6 ವರ್ಷಗಳ ಕಾಲ ಅಮಾನತ್ತುಗೊಳಿಸಲಾಗಿತ್ತು. ನಂತರ, 2018ರಲ್ಲಿ ಯತ್ನಾಳ್ ವಿರುದ್ಧ ಅಮಾನತ್ತು ಶಿಕ್ಷೆ ರದ್ದು ಮಾಡಿದ ಕೇಂದ್ರದ ವರಿಷ್ಠರು ಹಾಗೂ ಯಡಿಯೂರಪ್ಪ, ಅವರನ್ನು ವಾಪಸ್ ಪಕ್ಷಕ್ಕೆ ಕರೆ ತಂದು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜಾಪುರ ನಗರ ಕ್ಷೇತ್ರದಿಂದ ಕಣಕ್ಕಿಳಿಸಿದ್ದರು. ಇದೀಗ, ಪುನಃ ಯಡಿಯೂರಪ್ಪ ಕುಟುಂಬದ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಮೂರನೆ ಬಾರಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದಾರೆ.