ಉತ್ತರ ಪ್ರದೇಶ: ಪತ್ನಿಯ ಶೀಲ ಶಂಕಿಸಿ ತನ್ನ ಮೂವರು ಮಕ್ಕಳನ್ನು ಹತ್ಯೆಗೈದ ಬಿಜೆಪಿ ಕಾರ್ಯಕರ್ತನ ಸೆರೆ

ಸಾಂದರ್ಭಿಕ ಚಿತ್ರ
ಸಹರಾನ್‌ಪುರ: ಪತ್ನಿಯ ಶೀಲವನ್ನು ಶಂಕಿಸಿ ಆಕೆಯ ಮೇಲೆ ಗುಂಡು ಹಾರಿಸಿ,ತಮ್ಮ ಮೂವರು ಮಕ್ಕಳನ್ನು ಕೊಂದ ಆರೋಪದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತನೋರ್ವನನ್ನು ರವಿವಾರ ಪೋಲಿಸರು ಬಂಧಿಸಿದ್ದಾರೆ.
ಸಗಠೇಡಾ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಆರೋಪಿ ಯೋಗೇಶ್ ರೋಹಿಲ್ಲಾ ಸ್ವತಃ ಪೋಲಿಸರಿಗೆ ತನ್ನ ಕೃತ್ಯದ ಮಾಹಿತಿ ನೀಡಿದ್ದ ಎಂದು ಪೋಲಿಸರು ತಿಳಿಸಿದರು.
ತನ್ನ ಪತ್ನಿ ವಿವಾಹಬಾಹಿರ ಸಂಬಂಧವನ್ನು ಹೊಂದಿದ್ದಾಳೆ ಎಂದು ತಾನು ಶಂಕಿಸಿದ್ದೆ. ಹೀಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದೆ ಎಂದು ಸ್ಥಳಕ್ಕೆ ಧಾವಿಸಿದ್ದ ಪೋಲಿಸರಿಗೆ ರೋಹಿಲ್ಲಾ ತಿಳಿಸಿದ್ದ.
ಆತನ ಪುತ್ರಿ ಶ್ರದ್ಧಾ(12) ಮತ್ತು ಪುತ್ರ ದೇವಾಂಶ(5) ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಪುತ್ರ ಶಿವಾಂಶ(7) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಗುಂಡೇಟಿನಿಂದ ಗಾಯಗೊಂಡಿರುವ ಪತ್ನಿ ನೇಹಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮರಣೋತ್ತರ ಪರೀಕ್ಷೆಯ ಬಳಿಕ ರವಿವಾರ ಮೂವರು ಮಕ್ಕಳ ಅಂತ್ಯಸಂಸ್ಕಾರ ನಡೆಸಲಾಗಿದೆ.
ನೇಹಾಳ ಸೋದರನ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ರೋಹಿಲ್ಲಾನನ್ನು ಬಂಧಿಸಿರುವ ಪೋಲಿಸರು ಆತನ ಬಳಿಯಿಂದ ಪರವಾನಿಗೆಯಿದ್ದ ಪಿಸ್ತೂಲು, ಗುಂಡುಗಳು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ರೋಹಿಲ್ಲಾ 2012ರಲ್ಲಿ ಮೊದಲ ಪತ್ನಿಯ ನಿಧನದ ಬಳಿಕ 2013ರಲ್ಲಿ ನೇಹಾಳನ್ನು ಮದುವೆಯಾಗಿದ್ದು,ದಂಪತಿಗೆ ಮೂವರು ಮಕ್ಕಳಿದ್ದರು.