ನ್ಯಾ.ವರ್ಮಾ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ; ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು

Update: 2025-03-24 20:53 IST
ನ್ಯಾ.ವರ್ಮಾ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ; ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು

ಯಶವಂತ ವರ್ಮಾ | PC : PTI 

  • whatsapp icon

ಹೊಸದಿಲ್ಲಿ: ತನ್ನ ನಿವಾಸದಲ್ಲಿ ಭಾರೀ ಮೊತ್ತದ ಹಣ ಪತ್ತೆಯಾಗಿರುವ ವಿವಾದದಲ್ಲಿ ಸಿಲುಕಿರುವ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಯಶವಂತ ವರ್ಮಾ ಅವರನ್ನು ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ಮರುವರ್ಗಾವಣೆ ಮಾಡುವಂತೆ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಶಿಫಾರಸು ಮಾಡಿದೆ.

ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ತನ್ನ ಮಾ.20 ಮತ್ತು 24ರ ಸಭೆಗಳಲ್ಲಿ ನ್ಯಾ.ವರ್ಮಾ ಅವರನ್ನು ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವಾಪಸ್ ಕಳುಹಿಸಲು ಶಿಫಾರಸು ಮಾಡಿ ನಿರ್ಣಯವನ್ನು ತೆಗೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಅಲಹಾಬಾದ್ ಉಚ್ಚ ನ್ಯಾಯಾಲಯದ ವಕೀಲರ ಸಂಘವು ನ್ಯಾ.ವರ್ಮಾರನ್ನು ಅಲಹಾಬಾದ್ ಹೈಕೋರ್ಟ್‌ ಗೆ ವರ್ಗಾವಣೆ ಮಾಡುವ ಕೊಲಿಜಿಯಂ ನಿರ್ಧಾರಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿತ್ತು.

ಮಾ.14ರಂದು ನ್ಯಾ.ವರ್ಮಾ ಅವರ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿದ್ದಾಗ ಅಗ್ನಿಶಾಮಕ ದಳವು ಐದು ಚೀಲಗಳಲ್ಲಿ ಭಾರೀ ಪ್ರಮಾಣದಲ್ಲಿ ಅರೆಸುಟ್ಟಿದ್ದ ಕರೆನ್ಸಿ ನೋಟುಗಳನ್ನು ಪತ್ತೆ ಹಚ್ಚಿದೆ ಎಂದು ಮಾಧ್ಯಮಗಳು ವರದಿ ಮಾಡಿದ ಬಳಿಕ ಅವರು ವಿವಾದದ ಕೇಂದ್ರಬಿಂದುವಾಗಿದ್ದಾರೆ.

ಈ ಬಗ್ಗೆ ದಿಲ್ಲಿ ಹೈಕೋರ್ಟ್‌ ನ ಮುಖ್ಯ ನ್ಯಾಯಾಧೀಶ ದೇವೇಂದ್ರ ಕುಮಾರ ಉಪಾಧ್ಯಾಯ ಅವರು ಶುಕ್ರವಾರ ಆಂತರಿಕ ತನಿಖಾ ವರದಿಯನ್ನು ಸಲ್ಲಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಇನ್ನಷ್ಟು ತನಿಖೆಗಾಗಿ ವಿವಿಧ ಉಚ್ಚ ನ್ಯಾಯಾಲಯಗಳ ಮೂವರು ನ್ಯಾಯಾಧೀಶರನ್ನೊಳಗೊಂಡ ಸಮಿತಿಯನ್ನು ರಚಿಸಿದೆ.

ತನ್ನ ವಿರುದ್ಧದ ಆರೋಪಗಳನ್ನು ನ್ಯಾ.ವರ್ಮಾ ನಿರಾಕರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News