ಆಸ್ತಿ ಧ್ವಂಸ: ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಮಹಾರಾಷ್ಟ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಸುಪ್ರೀಂ ಕೋರ್ಟ್ | PC: PTI
ಹೊಸದಿಲ್ಲಿ: ಸಿಂಧೂದುರ್ಗ ಜಿಲ್ಲೆಯಲ್ಲಿ ಒಂದು ಮನೆ ಮತ್ತು ಎರಡು ಅಂಗಡಿಗಳನ್ನು ಧ್ವಂಸಗೊಳಿಸಲಾದ ಘಟನೆಯ ಬಗ್ಗೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಸುಪ್ರೀಂ ಕೋರ್ಟ್ ಸೋಮವಾರ ಮಹಾರಾಷ್ಟ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಕಳೆದ ತಿಂಗಳು ನಡೆದ ಐಸಿಸಿ ಚಾಂಪಿಯನ್ಸ್ ಟ್ರೊಫಿ ಪಂದ್ಯಾವಳಿಯ ವೇಳೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಂದರ್ಭದಲ್ಲಿ 15 ವರ್ಷದ ಬಾಲಕನೊಬ್ಬ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾನೆ ಎಂದು ಆರೋಪಿಸಿ ಕ್ಷುಲ್ಲಕ ದೂರೊಂದನ್ನು ದಾಖಲಿಸಲಾಗಿತ್ತು ಎಂದು ಅರ್ಜಿದಾರರು ಹೇಳಿದ್ದಾರೆ. ಆ ದೂರು ದಾಖಲಾದ ಬಳಿಕ ಅಧಿಕಾರಿಗಳು ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸುವ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಯಾವುದೇ ನೋಟಿಸ್‌ಗಳನ್ನು ನೀಡದೆ ಅಧಿಕಾರಿಗಳು ಎರಡು ಗುಜರಿ ಅಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ. ಈ ಪೈಕಿ ಒಂದು ಅಂಗಡಿ ಬಾಲಕನ ತಂದೆಗೆ ಸೇರಿದ್ದರೆ, ಇನ್ನೊಂದು ಚಿಕ್ಕಪ್ಪನಿಗೆ ಸೇರಿತ್ತು.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವೊಂದು ಸೋಮವಾರ ಮಹಾರಾಷ್ಟ್ರ ಸರಕಾರಕ್ಕೆ ನೋಟಿಸ್ ನೀಡಿ ನಾಲ್ಕು ವಾರಗಳೊಳಗೆ ಉತ್ತರ ನೀಡುವಂತೆ ಸೂಚಿಸಿದೆ.
ಮಹಾರಾಷ್ಟ್ರ ಸರಕಾರದ ಕ್ರಮವು ಸೊತ್ತುಗಳ ಧ್ವಂಸಕ್ಕೆ ಸಂಬಂಧಿಸಿ 2024 ನವೆಂಬರ್ 13ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿದೆ ಎಂಬುದಾಗಿ ಅರ್ಜಿಯಲ್ಲಿ ಬೆಟ್ಟು ಮಾಡಲಾಗಿದೆ.
ಮುಂಚಿತ ಶೋಕಾಸ್ ನೋಟಿಸ್ ನೀಡದೆ ಮತ್ತು ನೊಂದ ಪಕ್ಷಕ್ಕೆ ಪ್ರತಿಕ್ರಿಯಿಸಲು 15 ದಿನಗಳ ಸಮಯಾವಕಾಶ ನೀಡದೆ ಸೊತ್ತುಗಳನ್ನು ಧ್ವಂಸಗೊಳಿಸುವುದನ್ನು ತನ್ನ ಆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನಿಷೇಧಿಸಿತ್ತು ಹಾಗೂ ಈ ಸಂಬಂಧ ಅದು ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾರ್ಗಸೂತ್ರಗಳನ್ನು ಜಾರಿಗೊಳಿಸಿತ್ತು.