ಮಧ್ಯಪ್ರದೇಶ | ದಲಿತ ಬಾಲಕನ ಆತ್ಮಹತ್ಯೆ

Update: 2025-03-24 21:23 IST
ಮಧ್ಯಪ್ರದೇಶ | ದಲಿತ ಬಾಲಕನ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

  • whatsapp icon

ಭೋಪಾಲ : ಮಧ್ಯಪ್ರದೇಶದ ಛತ್ತರಪುರ ಜಿಲ್ಲೆಯಲ್ಲಿ 13ರ ಹರೆಯದ ದಲಿತ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳೀಯ ವ್ಯಾಪಾರಿಯೋರ್ವ ಆತನ ಮೇಲೆ ಹಲ್ಲೆ ನಡೆಸಿದ್ದ ಮತ್ತು ಜಾತಿನಿಂದನೆಯನ್ನು ಮಾಡಿದ್ದ ಎಂದು ಕುಟುಂಬವು ಆರೋಪಿಸಿದೆ.

ಎಂಟನೇ ತರಗತಿಯಲ್ಲಿ ಓದುತ್ತಿದ್ದ ಅಂಶು ಅಹಿರ್ವಾರ್ ಶನಿವಾರ ಲವಕುಶ ನಗರದಲ್ಲಿಯ ತನ್ನ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತನ್ನ ಅಂಗಡಿಯಲ್ಲಿನ ವಸ್ತುಗಳನ್ನು ಮುಟ್ಟಿದ್ದಕ್ಕಾಗಿ ಬ್ರಾಹ್ಮಣ ವ್ಯಾಪಾರಿ ರಾಮ ಶುಕ್ಲಾ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದ ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬ ಸದಸ್ಯರು ಮತ್ತು ಭೀಮ್ ಆರ್ಮಿ ಕಾರ್ಯಕರ್ತರು ಆರೋಪಿಸಿದ್ದಾರೆ.

‘ಶುಕ್ಲಾ ನನ್ನ ಮಗನನ್ನು ಬೈದಿದ್ದು ಮಾತ್ರವಲ್ಲ, ಬೆನ್ನಿಗೂ ಬಲವಾಗಿ ಹೊಡೆದಿದ್ದ. ನಾನು ಆತನ ಅಂಗಡಿಗೆ ಹೋಗಿ ವಿಚಾರಿಸಿದಾಗ ವಸ್ತುಗಳನ್ನು ಅನುಚಿತವಾಗಿ ಮುಟ್ಟಿದ್ದಕ್ಕಾಗಿ ನನ್ನ ಮಗನನ್ನು ಥಳಿಸಿದ್ದನ್ನು ಆತ ಒಪ್ಪಿಕೊಂಡಿದ್ದಾನೆ. ಶುಕ್ಲಾನ ಥಳಿತ ಮತ್ತು ಜಾತಿನಿಂದನೆಯಿಂದ ನೊಂದು ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಅಂಶುವಿನ ತಂದೆ ಕಿಶೋರ ಅಹಿರ್ವಾರ್ ಆರೋಪಿಸಿದರು.

ಘಟನೆಗೆ ಸಂಬಂಧಿಸಿದಂತೆ ರವಿವಾರ ನಡೆದ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಭೀಮ್ ಆರ್ಮಿಯ ಛತ್ತರಪುರ ಜಿಲ್ಲಾಧ್ಯಕ್ಷ ಸಂತೋಷ ರೈದಾಸ್ ಅವರು, ಶುಕ್ಲಾ ಬಾಲಕನ್ನು ಥಳಿಸಿದ್ದು ಮಾತ್ರವಲ್ಲ, ಜಾತಿ ನಿಂದನೆಯನ್ನೂ ಮಾಡಿದ್ದ ಎಂದು ಆರೋಪಿಸಿದರು. ‘ಶುಕ್ಲಾನ ವಿರುದ್ಧ ಕಠಿಣ ಕ್ರಮಕ್ಕೆ ನಾವು ಒತ್ತಾಯಿಸುತ್ತಿದ್ದೇವೆ. ಅಪ್ರಾಪ್ತ ವಯಸ್ಕ ಬಾಲಕನ ಮೇಲೆ ಕ್ರೌರ್ಯವೆಸಗಿ, ಆತನ ಸಾವಿಗೆ ಕಾರಣನಾಗಿರುವ ಶುಕ್ಲಾನನ್ನು ಜೈಲಿಗೆ ತಳ್ಳಬೇಕು’ ಎಂದು ಕಿಡಿಕಾರಿದರು.

ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ. ಬಾಲಕನ ಕುಟುಂಬದ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಛತ್ತರಪುರ ವಲಯ ಎಸ್‌ಪಿ ಅಮನ್ ಮಿಶ್ರಾ ತಿಳಿಸಿದರು.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News