ಕೇರಳ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣ | ಎಂಟು ಸಿಪಿಎಂ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

PC: newindianexpress.com
ಕಣ್ಣೂರು(ಕೇರಳ) : ಕಣ್ಣೂರು ಜಿಲ್ಲೆಯಲ್ಲಿ ಎರಡು ದಶಕಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಎಂಟು ಸಿಪಿಎಂ ಕಾರ್ಯಕರ್ತರಿಗೆ ಸೋಮವಾರ ತಲಶ್ಶೇರಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ 50,000 ರೂ.ದಂಡವನ್ನು ವಿಧಿಸಿದೆ. ಓರ್ವನಿಗೆ ಮೂರು ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು 25,000 ರೂ.ದಂಡ ವಿಧಿಸಲಾಗಿದೆ.
ಈ ಪೈಕಿ ಟಿ.ಕೆ.ರಜೀಶ್ ಮತ್ತು ಕೇರಳ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಪಿ.ಎಂ.ಮನೋಜ್ ಸೋದರ ಪಿ.ಎಂ.ಮನೋರಾಜ್ ಅವರು 2012ರಲ್ಲಿ ನಡೆದಿದ್ದ ಟಿ.ಪಿ.ಚಂದ್ರಶೇಖರನ್ ಕೊಲೆ ಪ್ರಕರಣದಲ್ಲಿ ಈಗಾಗಲೇ ಜೈಲುಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ತಲಶ್ಶೇರಿ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಕೆ.ಟಿ.ನಿಸಾರ್ ಅಹ್ಮದ್ ಅವರು ಬಿಜೆಪಿ ಕಾರ್ಯಕರ್ತ ಎಳಂಬಿಲಯಿ ಸೂರಜ್ ಕೊಲೆ ಪ್ರಕರಣದಲ್ಲಿ ಒಂಭತ್ತು ಸಿಪಿಎಂ ಕಾರ್ಯಕರ್ತರನ್ನು ತಪ್ಪಿತಸ್ಥರು ಎಂದು ಶುಕ್ರವಾರ ಘೋಷಿಸಿದ್ದರು.
ಪ್ರಾಸಿಕ್ಯೂಷನ್ ಪ್ರಕಾರ ಸೂರಜ್ ಸಿಪಿಎಂ ತೊರೆದು ಬಿಜೆಪಿಗೆ ಸೇರಿದ ಬಳಿಕ ರಾಜಕೀಯ ದ್ವೇಷದಿಂದ ಆತನ ಕೊಲೆ ಮಾಡಲಾಗಿತ್ತು.
ಟಿ.ಪಿ.ಚಂದ್ರಶೇಖರನ್ ಕೊಲೆಗೆ ಸಂಬಂಧಿಸಿದಂತೆ ರಜೀಶನನ್ನು ಮುಂಬೈಯಲ್ಲಿ ಬಂಧಿಸಿದ್ದ ಪೋಲಿಸರು ಆತನ ಹೇಳಿಕೆಯ ಆಧಾರದಲ್ಲಿ ಆತನ ಜೊತೆಗೆ ಮನೋರಾಜ್ ನನ್ನೂ ಆರೋಪಿಯನ್ನಾಗಿ ಹೆಸರಿಸಿದ್ದರು.
ಪ್ರಾಸಿಕ್ಯೂಷನ್ ಪ್ರಕಾರ ,2005 ಆ.7ರಂದು ಬೆಳಿಗ್ಗೆ ಮುಳಪ್ಪಿಲಂಗಡ ದೂರವಾಣಿ ವಿನಿಮಯ ಕೇಂದ್ರದ ಎದುರು ಆಟೋರಿಕ್ಷಾದಲ್ಲಿ ಬಂದಿಳಿದಿದ್ದ ಗುಂಪು ಸೂರಜ ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು.
ಇದಕ್ಕೂ ಆರು ತಿಂಗಳು ಮೊದಲು ಅದಾಗಲೇ ಸೂರಜ್ ಹತ್ಯೆಗೆ ಪ್ರಯತ್ನಿಸಲಾಗಿತ್ತು. ಕಾಲುಗಳಿಗೆ ತೀವ್ರ ಗಾಯಗಳಾಗಿದ್ದ ಸೂರಜ್ ಆರು ತಿಂಗಳು ಹಾಸಿಗೆಗೆ ಅಂಟಿಕೊಂಡಿದ್ದರು.
ಕೊಲೆ ಮತ್ತು ಪಿತೂರಿ ಆರೋಪದಲ್ಲಿ ಒಟ್ಟು 12 ಸಿಪಿಎಂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಥಮ ಆರೋಪಿ ಪಿ.ಕೆ.ಶಂಸುದ್ದೀನ್ ಅಲಿಯಾಸ್ ಶಮ್ಸು ಮತ್ತು 12ನೇ ಆರೋಪಿ ಟಿ.ಪಿ.ರವೀಂದ್ರನ್ ವಿಚಾರಣೆ ಅವಧಿಯಲ್ಲಿ ಮೃತಪಟ್ಟಿದ್ದರೆ, 10ನೇ ಆರೋಪಿ ಪ್ರಕಾಶನ್ ಖುಲಾಸೆಗೊಂಡಿದ್ದ.