‘ಇಂಡಿಯಾಸ್ ಗಾಟ್ ಲೇಟೆಂಟ್’ ವಿವಾದ: ಮಹಾರಾಷ್ಟ್ರ ಸೈಬರ್ ಪೊಲೀಸರೆದುರು ಹೇಳಿಕೆ ದಾಖಲಿಸಿದ ಕಾಮೆಡಿಯನ್ ಸಮಯ್ ರೈನಾ

PC : PTI
ಮುಂಬೈ: ತಮ್ಮ ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿನ ಆಕ್ಷೇಪಾರ್ಹ ಹೇಳಿಕೆಯ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮೆಡಿಯನ್ ಸಮಯ್ ರೈನಾ ನೀಡಿದ ಹೇಳಿಕೆಯನ್ನು ಸೋಮವಾರ ಮಹಾರಾಷ್ಟ್ರ ಸೈಬರ್ ಘಟಕದ ಪೊಲೀಸರು ದಾಖಲಿಸಿಕೊಂಡರು.
ಸಮಯ್ ರೈನಾರ ‘ಇಂಡಿಯಾಸ್ ಗಾಟ್ ಲೇಟೆಂಟ್’ ವೆಬ್ ಕಾರ್ಯಕ್ರಮದಲ್ಲಿ ಪೋಷಕರು ಹಾಗೂ ಲೈಂಗಿಕತೆ ಕುರಿತು ಪಾಡ್ ಕಾಸ್ಟರ್ ರಣವೀರ್ ಅಲ್ಲಾಬಾದಿಯಾ ನೀಡಿದ್ದ ಅಸಭ್ಯ ಹೇಳಿಕೆಯ ಕುರಿತು ವ್ಯಾಪಕ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಿಗೇ ರಣವೀರ್ ಅಲ್ಲಾಬಾದಿಯಾ ಹಾಗೂ ಇನ್ನಿತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಮಹಾರಾಷ್ಟ್ರ ಮಾಹಿತಿ ಸುರಕ್ಷತಾ ವಿಭಾಗವಾದ ಮಹಾರಾಷ್ಟ್ರ ಸೈಬರ್ ಘಟಕವು, ಈ ಕುರಿತು ತನಿಖೆ ನಡೆಸುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸುವಂತೆ ಸಮಯ್ ರೈನಾರಿಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಇತ್ತೀಚೆಗಷ್ಟೆ ವಿದೇಶದಿಂದ ಮರಳಿರುವ ಸಮಯ್ ರೈನಾ, ಮಹಾಪೆಯಲ್ಲಿರುವ ಮಹಾರಾಷ್ಟ್ರ ಸೈಬರ್ ಘಟಕದ ಮುಖ್ಯ ಕಚೇರಿಯಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದರು ಎಂದೂ ಅವರು ಹೇಳಿದರು.
ಸೋಮವಾರ ಮಧ್ಯಾಹ್ನ ಕಚೇರಿಗೆ ಆಗಮಿಸಿದ ಸಮಯ್ ರೈನಾ, ಐದು ಗಂಟೆಗಳ ಕಾಲ ತಮ್ಮ ಹೇಳಿಕೆಯನ್ನು ದಾಖಲಿಸಿದರು ಹಾಗೂ ಸಂಜೆ 6.45ರ ವೇಳೆಗೆ ಕಚೇರಿಯ ಆವರಣದಿಂದ ವಾಪಸು ತೆರಳಿದರು ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ, ಮಹಾರಾಷ್ಟ್ರ ಸೈಬರ್ ಘಟಕವು ರಣವೀರ್ ಅಲ್ಲಾಬಾದಿಯಾ, ಆಶಿಶ್ ಚಂಚ್ಲಾನಿ, ಅಪೂರ್ವ ಮಖೀಜಾ ಹಾಗೂ ಇನ್ನಿತರರ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು ಎಂದು ಅವರು ಹೇಳಿದರು.
ಫೆಬ್ರವರಿ ತಿಂಗಳಲ್ಲಿ ಪ್ರಸಾರವಾಗಿದ್ದ ಸಮಯ್ ರೈನಾರ ಇದೀಗ ಅಳಿಸಿ ಹಾಕಲಾಗಿರುವ ‘ಇಂಡಿಯಾಸ್ ಗಾಟ್ ಲೇಟೆಂಟ್’ ವೆಬ್ ಕಾರ್ಯಕ್ರಮದಲ್ಲಿ ಪಾಡ್ ಕಾಸ್ಟರ್ ರಣವೀರ್ ಅಲ್ಲಾಬಾದಿಯಾ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯ ವಿರುದ್ಧ ಅಂತರ್ಜಾಲ ತಾಣ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದರಿಂದ, ಸಮಯ್ ರೈನಾ ತೊಂದರೆಗೆ ಸಿಲುಕಿಕೊಂಡಿದ್ದರು. ಇದರ ಬೆನ್ನಿಗೇ, ಸಮಯ್ ರೈನಾ ಹಾಗೂ ರಣವೀರ್ ಅಲ್ಲಾಬಾದಿಯಾ ಸೇರಿದಂತೆ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇನ್ನಿತರರ ವಿರುದ್ಧ ಹಲವು ಪೊಲೀಸ್ ದೂರುಗಳು ದಾಖಲಾಗಿದ್ದವು.