ಸುಟ್ಟ ನೋಟಿನ ಕಂತೆಯ ವಿಡಿಯೊ ಬಿಡುಗಡೆ ಮಾಡಿದ ಸುಪ್ರೀಂಕೋರ್ಟ್!

ಹೊಸದಿಲ್ಲಿ: ಹೈಕೋರ್ಟ್ ನ್ಯಾಯಮೂರ್ತಿ ಮನೆಯಲ್ಲಿ ಬೆಂಕಿ ಆಕಸ್ಮಿಕ ಸಂದರ್ಭದಲ್ಲಿ ನೋಟಿನ ಕಂತೆಗಳು ಪತ್ತೆಯಾದ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ನೀಡಿದ ಸುಟ್ಟ ನೋಟಿನ ಕಂತೆಗಳ ದೃಶ್ಯದ ತುಣುಕನ್ನು ಸುಪ್ರೀಂಕೋರ್ಟ್ ಅಪ್ಲೋಡ್ ಮಾಡಿದೆ.
ಇದಕ್ಕೂ ಮುನ್ನ ದೆಹಲಿ ಪೊಲೀಸರು ಸಿಜೆಐ ಸಂಜೀವ ಖನ್ನಾ ಮತ್ತು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಅವರಿಗೆ ಈ ಕುರಿತ ವಿಡಿಯೊ ದಾಖಲೆಯನ್ನು ಅರೋರಾ ಹಸ್ತಾಂತರಿಸಿದ್ದರು. ಇದರಿಂದಾಗಿ ಕಳಂಕಿತ ನ್ಯಾಯಮೂರ್ತಿ ಯಶವಂತ ವರ್ಮಾ ವಿರುದ್ಧದ ಪ್ರಕರಣದ ಬಗ್ಗೆ ಆಳವಾದ ತನಿಖೆ ನಡೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಈ ಪುರಾವೆಯ ನಡುವೆಯೂ ತಾನು ಅಮಾಯಕ ಹಾಗೂ ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ನ್ಯಾಯಮೂರ್ತಿ ವರ್ಮಾ ಹೇಳಿದ್ದಾರೆ.
ಈ ಮಧ್ಯೆ ಮೂರು ಸಂದೇಹಗಳ ಬಗ್ಗೆ ವರ್ಮಾ ಅವರಿಂದ ಸ್ಪಷ್ಟನೆ ಪಡೆಯುವಂತೆ ಸಿಜೆಐ ಖನ್ನಾ ದೆಹಲಿ ಸಿಜೆಐಯವರಿಗೆ ಸೂಚನೆ ನೀಡಿದ್ದರು. ಅವರ ಮನೆಯ ಕೊಠಡಿಯಲ್ಲಿ ಪತ್ತೆಯಾದ ನಗದಿಗೆ ಸಂಬಂಧಿಸಿದಂತೆ ಹೇಗೆ ಲೆಕ್ಕ ನೀಡುತ್ತಾರೆ, ಕೊಠಡಿಯಲ್ಲಿ ಪತ್ತೆಯಾದ ನಗದಿನ ಮೂಲ ಯಾವುದು ಹಾಗೂ ಮಾರ್ಚ್ 15ರಂದು ಕೊಠಡಿಯಿಂದ ಸುಟ್ಟ ನೋಟುಗಳನ್ನು ತೆಗೆದವರು ಯಾರು ಎಂಬ ಮೂರು ಅಂಶಗಳ ಬಗ್ಗೆ ಸ್ಪಷ್ಟನೆ ಬಯಸಿದ್ದರು.
ಸಿಜೆಐ ಸೂಚನೆಯಂತೆ ವರ್ಮಾ ಅವರಿಂದ ಸ್ಪಷ್ಟನೆ ಕೋರಿದಾಗ "ನನ್ನ ವಿರುದ್ಧ ಪಿತೂರಿ ನಡೆದಿರುವ ಸಂದೇಹವಿದೆ" ಎಂದು ಹೇಳಿದ್ದರು. "ಆದರೆ ಮೇಲ್ನೋಟಕ್ಕೆ ಈ ಪ್ರಕರಣದ ಬಗ್ಗೆ ಆಳವಾದ ತನಿಖೆ ನಡೆಯಬೇಕು ಎಂಬ ಅಭಿಪ್ರಾಯ ನನ್ನದು" ಎಂದು ದೆಹಲಿ ಸಿಜೆ ವರದಿ ಸಲ್ಲಿಸಿದ್ದಾರೆ.
ಕಳೆದ ಆರು ತಿಂಗಳಲ್ಲಿ ಹೈಕೋರ್ಟ್ ರಿಜಿಸ್ಟ್ರಿಯಲ್ಲಿ ಸೇವೆ ಸಲ್ಲಿಸಿದವರ ವಿವರ, ಕಳಂಕಿತ ನ್ಯಾಯಮೂರ್ತಿ ನಿವಾಸಕ್ಕೆ ನಿಯೋಜನೆಯಾದ ಭದ್ರತಾ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವರ ಸಲ್ಲಿಸುವಂತೆಯೂ ಸಿಜೆಐ ಸೂಚಿಸಿದ್ದಾರೆ. ಕಳೆದ ಆರು ತಿಂಗಳ ಅವಧಿಯಲ್ಲಿ ನ್ಯಾಯಮೂರ್ತಿ ವರ್ಮಾ ಅವರ ದೂರವಾಣಿ ಕರೆಗಳ ದಾಖಲೆಗಳನ್ನು ಒದಗಿಸುವಂತೆಯೂ ಸೇವಾ ಪೂರೈಕೆದಾರರಿಗೆ ಆದೇಶಿಸಲಾಗಿದೆ ಎಂದು ದೆಹಲಿ ಸಿಜೆಐ ಹೇಳಿದ್ದಾರೆ.