ಈದ್ ಪ್ರಯುಕ್ತ ಬಿಜೆಪಿಯಿಂದ 32 ಲಕ್ಷ ಬಡ ಮುಸ್ಲಿಮರಿಗೆ ʼಸೌಗಾತ್-ಎ-ಮೋದಿʼ ಕಿಟ್ ವಿತರಣೆ !

Update: 2025-03-25 15:23 IST
ಈದ್ ಪ್ರಯುಕ್ತ ಬಿಜೆಪಿಯಿಂದ 32 ಲಕ್ಷ ಬಡ ಮುಸ್ಲಿಮರಿಗೆ ʼಸೌಗಾತ್-ಎ-ಮೋದಿʼ ಕಿಟ್ ವಿತರಣೆ !

ಸಾಂದರ್ಭಿಕ ಚಿತ್ರ | ANI

  • whatsapp icon

ಹೊಸದಿಲ್ಲಿ : ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ́ಸೌಗಾತ್-ಎ-ಮೋದಿʼ ಅಭಿಯಾನದ ಮೂಲಕ ಈದ್‌ಗೆ ಮುಂಚಿತವಾಗಿ ದೇಶಾದ್ಯಂತ 32 ಲಕ್ಷ ಹಿಂದುಳಿದ ಮುಸ್ಲಿಮರಿಗೆ ವಿಶೇಷ ಕಿಟ್‌ಗಳನ್ನು ವಿತರಿಸುವ ಗುರಿಯನ್ನು ಹೊಂದಿದೆ ANI ವರದಿ ಮಾಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾರ್ಗದರ್ಶನದಲ್ಲಿ ಮಂಗಳವಾರ ದಿಲ್ಲಿಯ ನಿಝಾಮುದ್ದೀನ್‌ನಿಂದ ಈ ಅಭಿಯಾನವು ಪ್ರಾರಂಭವಾಗಿದೆ. ಬಡ ಮುಸ್ಲಿಂ ಕುಟುಂಬಗಳು ಯಾವುದೇ ತೊಂದರೆಯಿಲ್ಲದೆ ಈದ್‌ ಹಬ್ಬವನ್ನು ಆಚರಿಸುವಂತೆ ನೆರವಾಗಲು ಕಿಟ್‌ಗಳನ್ನು ವಿತರಿಸಲಾಗುತ್ತದೆ. ಅಭಿಯಾನವನ್ನು ಯಶಸ್ವಿಗೊಳಿಸಲು 32,000 ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕರ್ತರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಮಾತನಾಡಿ, ಪವಿತ್ರ ರಮಝಾನ್, ಈದ್, ಗುಡ್ ಫ್ರೈಡೆ, ಈಸ್ಟರ್, ನೌರುಝ್ ಸಂದರ್ಭಗಳಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸೌಗಾತ್-ಎ-ಮೋದಿ ಅಭಿಯಾನದ ಮೂಲಕ ಅಗತ್ಯವಿರುವವರಿಗೆ ಕಿಟ್ ವಿತರಿಸಲಿದೆ. ಜಿಲ್ಲಾ ಮಟ್ಟದಲ್ಲೂ ಈದ್ ಮಿಲನ್ ಆಚರಣೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಯಾಸಿರ್ ಜಿಲಾನಿ ಮಾತನಾಡಿ, ಸೌಗಾತ್-ಎ-ಮೋದಿ ಯೋಜನೆಯು ಮುಸ್ಲಿಂ ಸಮುದಾಯದ ಕಲ್ಯಾಣ ಯೋಜನೆಗಳನ್ನು ಉತ್ತೇಜಿಸುವ ಮತ್ತು ಬಿಜೆಪಿ ಮತ್ತು ಎನ್‌ಡಿಎಯನ್ನು ರಾಜಕೀಯವಾಗಿ ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಅಭಿಯಾನವು 32 ಲಕ್ಷ ಮುಸ್ಲಿಂ ಕುಟುಂಬಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಸೌಗಾತ್-ಎ-ಮೋದಿ ಅಭಿಯಾನದ ಅಡಿಯಲ್ಲಿ ವಿತರಿಸಲಾದ ಕಿಟ್‌ಗಳು ಆಹಾರ ಪದಾರ್ಥಗಳ ಜೊತೆಗೆ ಬಟ್ಟೆ, ಖರ್ಜೂರ, ಒಣ ಹಣ್ಣುಗಳು, ಸಕ್ಕರೆ ಮತ್ತು ಬಟ್ಟೆಗಳನ್ನು ಒಳಗೊಂಡಿರಲಿದೆ. ಮಹಿಳೆಯರ ಕಿಟ್ ಸೂಟ್ ಬಟ್ಟೆಯನ್ನು ಸಹ ಹೊಂದಿರುತ್ತದೆ. ಪುರುಷರ ಕಿಟ್‌ನಲ್ಲಿ ಕುರ್ತಾ-ಪೈಜಾಮ ಇರಲಿದೆ. 

ಬಿಜೆಪಿಯ ಈ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ʼಕಾಂಗ್ರೆಸ್ ಮುಸ್ಲಿಮರನ್ನು ಓಲೈಕೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಾ ಬಂದಿತ್ತು. ಆದರೆ, ಈಗ ಬಿಜೆಪಿಯೇ ಮುಸ್ಲಿಮರಿಗೆ ಕಿಟ್ ವಿತರಿಸುತ್ತಿದೆ. ಬಿಜೆಪಿ ಈ ತುಷ್ಟೀಕರಣ ರಾಜಕೀಯವನ್ನು ಹೇಗೆ ಸಮರ್ಥಿಸುತ್ತಿದೆ?ʼ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News