ನಗದು ಪತ್ತೆ ಪ್ರಕರಣದ 12 ದಿನಗಳ ಬಳಿಕ ನ್ಯಾಯಮೂರ್ತಿ ನಿವಾಸದ ದಾಸ್ತಾನು ಕೊಠಡಿಗೆ ಬೀಗಮುದ್ರೆ!

Update: 2025-03-27 08:02 IST
ನಗದು ಪತ್ತೆ ಪ್ರಕರಣದ 12 ದಿನಗಳ ಬಳಿಕ ನ್ಯಾಯಮೂರ್ತಿ ನಿವಾಸದ ದಾಸ್ತಾನು ಕೊಠಡಿಗೆ  ಬೀಗಮುದ್ರೆ!

PC: x.com/ArgusNews_in

  • whatsapp icon

ಹೊಸದಿಲ್ಲಿ: ಹನ್ನೆರಡು ದಿನಗಳ ಹಿಂದೆ ನಡೆದ ಬೆಂಕಿ ಆಕಸ್ಮಿಕ ಸಂದರ್ಭದಲ್ಲಿ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿವೆ ಎನ್ನಲಾದ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದ ದಾಸ್ತಾನು ಕೊಠಡಿಗೆ ಬುಧವಾರ ದೆಹಲಿ ಪೊಲೀಸರು ಬೀಗಮುದ್ರೆ ಹಾಕಿದ್ದಾರೆ. ನಿವಾಸದ ಆವರಣದ ವಿಡಿಯೊ ಚಿತ್ರೀಕರಣವನ್ನೂ ಮಾಡಿದ್ದಾರೆ.

ನಗದು ಪತ್ತೆಯಾಗಿದೆ ಎಂಬ ಹೇಳಿಕೆಯನ್ನು ನ್ಯಾಯಮೂರ್ತಿ ಅಲ್ಲಗಳೆದಿರುವ ಹಿನ್ನೆಲೆಯಲ್ಲಿ ತನಿಖೆಯ ಭಾಗವಾಗಿ ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಾವಳಿಗಳನ್ನು ಕೂಡಾ ಪೊಲೀಸರು ಸಂಗ್ರಹಿಸಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬೆಂಕಿ ಅನಾಹುತದ ಕಾರಣದ ಬಗ್ಗೆ ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ.

ನಿವಾಸಕ್ಕೆ ಅನಧಿಕೃತ ಪ್ರವೇಶದ ಬಗ್ಗೆ ಯಾವುದೇ ಹಂತದಲ್ಲಿ ಯಾವುದೇ ಪುರಾವೆ ಸಿಸಿಟಿವಿಯ ದೃಶ್ಯಾವಳಿಗಳ ಆರಂಭಿಕ ವಿಶ್ಲೇಷಣೆಯಿಂದ ಲಭ್ಯವಾಗಿಲ್ಲ ಎಂದು ಮೂಲಗಳು ಹೇಳಿವೆ. ಹಲವು ಕ್ಯಾಮೆರಾಗಳು ಪ್ರವೇಶದ್ವಾರವನ್ನು ಕೇಂದ್ರೀಕರಿಸಿಲ್ಲ ಹಾಗೂ ಪ್ರವೇಶ ಮತ್ತು ನಿರ್ಗಮನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಲಾಗಿದೆ.

ವಿಶೇಷ ತನಿಖಾ ತಂಡ ಮತ್ತು ವಿಶೇಷ ಘಟಕದ ಇಬ್ಬರು ಹೆಚ್ಚುವರಿ ಸಿಪಿ ಶ್ರೇಣಿಯ ಅಧಿಕಾರಿಗಳು ಸುಮಾರು 40 ಪುಟಗಳ ವರದಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ನ್ಯಾಯಮೂರ್ತಿ ವರ್ಮಾ ಅವರ ಮೊಬೈಲ್ ಕರೆಯ ವಿವರಗಳು ಮತ್ತು ಇಂಟರ್ನೆಟ್ ಪ್ರೊಟೋಕಾಲ್ ವಿವರಗಳಿವೆ. ಇದನ್ನು ಸುಪ್ರೀಂಕೋರ್ಟ್ ನ ತನಿಖಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.

ಬುಧವಾರ ಮಧ್ಯಾಹ್ನ ಪೊಲೀಸ್ ತಂಡ ತುಘಲಕ್ ಕ್ರೆಸೆಂಟ್ ರಸ್ತೆಯಲ್ಲಿರುವ ನ್ಯಾಯಮೂರ್ತಿಗಳ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದೆ. ಡಿಸಿಪಿ ದೇವೇಶ್ ಮಹ್ಲಾ, ಎಸಿಪಿ ವೀರೇಂದ್ರ ಜೈನ್ ಹಾಗೂ ಕ್ಯಾಮೆರಾ ತಂಡ ಎರಡು ಗಂಟೆ ಕಾಲ ಅಲ್ಲಿ ಮಾಹಿತಿ ಕಲೆ ಹಾಕಿತು. ಬೀಗಮುದ್ರೆ ಹಾಕುವ ಮುನ್ನ ದಾಸ್ತಾನು ಕೊಠಡಿಯ ವಿಡಿಯೊ ಚಿತ್ರೀಕರಣ ನಡೆಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News