ನ್ಯಾಯಮೂರ್ತಿ ಯಶವಂತ್ ವರ್ಮಾ ವರ್ಗಾವಣೆಗೆ ವಿರೋಧ : ಅಲಹಾಬಾದ್ ಹೈಕೋರ್ಟ್ ವಕೀಲರ ಸಂಘದಿಂದ ಮುಷ್ಕರ

Update: 2025-03-25 18:12 IST
ನ್ಯಾಯಮೂರ್ತಿ ಯಶವಂತ್ ವರ್ಮಾ ವರ್ಗಾವಣೆಗೆ ವಿರೋಧ : ಅಲಹಾಬಾದ್ ಹೈಕೋರ್ಟ್ ವಕೀಲರ ಸಂಘದಿಂದ ಮುಷ್ಕರ
Photo | PTI
  • whatsapp icon

ಹೊಸದಿಲ್ಲಿ : ನಗದು ಪತ್ತೆ ಆರೋಪದ ಬಳಿಕ ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಅಲಹಾಬಾದ್ ಹೈಕೋರ್ಟ್ ವಕೀಲರ ಸಂಘ ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ.

ಅಲಹಾಬಾದ್ ಹೈಕೋರ್ಟ್‌ ಗೇಟ್ ಸಂಖ್ಯೆ 3ರಲ್ಲಿ ಜಮಾಯಿಸಿ ವಕೀಲರು ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದರು.

ವಕೀಲರ ಸಂಘದ ಅಧ್ಯಕ್ಷ ಅನಿಲ್ ತಿವಾರಿ ಮಾತನಾಡಿ, ಈ ಪ್ರತಿಭಟನೆ ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧೀಶರ ವಿರುದ್ಧ ಅಲ್ಲ. ಆದರೆ, ನ್ಯಾಯಾಂಗ ವ್ಯವಸ್ಥೆಗೆ ದ್ರೋಹ ಬಗೆದವರ ವಿರುದ್ಧವಾಗಿದೆ. ನಮ್ಮ ಹೋರಾಟ ಭ್ರಷ್ಟಾಚಾರದಲ್ಲಿ ತೊಡಗಿರುವವರ ವಿರುದ್ಧವಾಗಿದೆ ಮತ್ತು ಪಾರದರ್ಶಕತೆ ಇಲ್ಲದ ವ್ಯವಸ್ಥೆಯ ವಿರುದ್ಧವಾಗಿದೆ ಎಂದು ಹೇಳಿದರು.

ಯಶವಂತ್ ವರ್ಮಾ ಅವರ ವರ್ಗಾವಣೆ ಆದೇಶವನ್ನು ಪರಿಶೀಲಿಸಿ ಹಿಂಪಡೆಯಬೇಕು. ಈ ಕುರಿತು ವಕೀಲರ ಸಂಘ ಹೋರಾಟಕ್ಕೆ ಸಿದ್ಧವಾಗಿದೆ. ಮೊದಲಿನಿಂದಲೂ ಈ ವಿಚಾರವನ್ನು ಮುಚ್ಚಿಡುವ ಪ್ರಯತ್ನ ನಡೆದಿದೆ. ಭಾರತದಾದ್ಯಂತ ವಕೀಲರು ಈ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಸ್ಪಷ್ಟ ನಿಲುವನ್ನು ತೆಗೆದುಕೊಳ್ಳುವವರೆಗೆ ಏನೇ ಪರಿಣಾಮ ಆದರೂ ನಾವು ಕೆಲಸ ಮುಂದುವರಿಸುವುದಿಲ್ಲ ಎಂದು ಹೇಳಿದರು.

ಮಾ.14ರಂದು ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಅಗ್ನಿಶಾಮಕ ದಳವು ಅಪಾರ ಪ್ರಮಾಣದಲ್ಲಿ ಅರೆಸುಟ್ಟ ಕರೆನ್ಸಿ ನೋಟುಗಳನ್ನು ಪತ್ತೆ ಹಚ್ಚಿದೆ ಎಂದು ಮಾಧ್ಯಮಗಳು ವರದಿ ಮಾಡಿತ್ತು. ನಗದು ಪತ್ತೆ ಬಳಿಕ ವಿವಾದದಲ್ಲಿ ಸಿಲುಕಿರುವ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಯಶವಂತ ವರ್ಮಾ ಅವರನ್ನು ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಶಿಫಾರಸು ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News