ನೈರ್ಮಲ್ಯ ಕಾರ್ಮಿಕರ ಸಮವಸ್ತ್ರದಲ್ಲಿ ಯುಟ್ಯೂಬರ್ ಮನೆ ಮೇಲೆ ದಾಳಿ ; ಮಲ ಸುರಿದು ಆಕ್ರೋಶ

Update: 2025-03-25 08:45 IST
ನೈರ್ಮಲ್ಯ ಕಾರ್ಮಿಕರ ಸಮವಸ್ತ್ರದಲ್ಲಿ ಯುಟ್ಯೂಬರ್ ಮನೆ ಮೇಲೆ ದಾಳಿ ; ಮಲ ಸುರಿದು ಆಕ್ರೋಶ

 ಸವುಕ್ಕು ಶಂಕರ್

  • whatsapp icon

ಚೆನ್ನೈ : ನೈರ್ಮಲ್ಯ ಕಾರ್ಮಿಕರ ಸಮವಸ್ತ್ರದಲ್ಲಿ ನಗರದ ಯುಟ್ಯೂಬರ್ ಸವುಕ್ಕು ಶಂಕರ್ ಎಂಬುವವರ ಮನೆಗೆ ನುಗ್ಗಿದ ಗುಂಪೊಂದು ಅವರ ಮನೆಯ ಕೊಠಡಿ, ಅಡುಗೆಮನೆ ಮತ್ತು ಹಜಾರದಲ್ಲಿ ಬಕೆಟ್‍ಗಟ್ಟಲೆ ಕೆಸರು, ಹೊಲಸು ಮತ್ತು ಮಲ ಸುರಿದು ಆಕ್ರೋಶ ವ್ಯಕ್ತಪಡಿಸಿದ ಪ್ರಕರಣ ಬೆಳಕಿಗೆ ಬಂದಿದೆ. ನೈರ್ಮಲ್ಯ ಕಾರ್ಮಿಕರ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯವನ್ನು ವಿರೋಧಿಸಿ ಈ ದಾಳಿ ನಡೆದಿರಬೇಕು ಎಂದು ಶಂಕಿಸಲಾಗಿದೆ.

ಶಂಕರ್ ಅವರ ತಾಯಿ ಕಮಲಾ ಒಬ್ಬರೇ ಮನೆಯಲ್ಲಿದ್ದ ಸಂದರ್ಭದಲ್ಲಿ ಮನೆಯ ಹಿಂಬಾಗಿಲು ಒಡೆದು ಒಳ ಪ್ರವೇಶಿಸಿದ ಗುಂಪು, ಮನೆಯನ್ನು ಲೂಟಿ ಮಾಡಿ, ಇದೇ ಬಗೆಯ ಅಭಿಪ್ರಾಯವನ್ನು ಮಗನ ಮುಂದೆ ವ್ಯಕ್ತಪಡಿಸಿದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು. ಮಹಿಳೆಯ ಫೋನ್ ಕಿತ್ತುಕೊಂಡು, ಶಂಕರ್ ಗೆ ವಿಡಿಯೋ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಾರಿಯಾಯಿತು. "ನನ್ನ ಮಗನ ವಿರುದ್ಧ ಯಾವುದೇ ಸಮಸ್ಯೆ ಇದ್ದಲ್ಲಿ, ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿತ್ತು" ಎಂದು ಕಮಲಾ ಪ್ರತಿಕ್ರಿಯಿಸಿದ್ದಾರೆ.

ತಕ್ಷಣವೇ ಪೊಲೀಸರು ಧಾವಿಸಿದರು. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ದಾಳಿಕೋರರನ್ನು ಪತ್ತೆ ಮಾಡಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು.

ನೈರ್ಮಲ್ಯ ಕಾರ್ಮಿಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಎಂಬ ಆರೋಪವನ್ನು ಶಂಕರ್ ಅಲ್ಲಗಳೆದಿದ್ದಾರೆ. "ನಿಜವಾಗಿ ನೈರ್ಮಲ್ಯ ಕಾರ್ಮಿಕರಿಗೆ ಸಲ್ಲಬೇಕಾದ ಹಣವನ್ನು ಶಾಸಕರು ಒಯ್ದಿದ್ದಾರೆ ಎಂದು ನಾನು ಬಿಂಬಿಸಿದ್ದೆ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಶಂಕರ್ ಮೇಲಿನ ದಾಳಿಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದಾಳಿಕೋರರನ್ನು ನ್ಯಾಯದ ಕಟಕಟೆಯ ಮುಂದೆ ತರುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ.

ಇಂಥ ದಾಳಿಯನ್ನು ಯಾರೂ ಒಪ್ಪುವಂಥದ್ದಲ್ಲ ಎಂದು ಎಐಎಡಿಎಂಕೆಯ ಎಡಪ್ಪಾಡಿ ಪಳನಿಸ್ವಾಮಿ ಹೇಳಿದ್ದಾರೆ. "ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವವರು ಇದನ್ನು ಸಹಿಸುವುದಿಲ್ಲ. ಸರ್ಕಾರದ ನಿಯಮ ಪಾಲಿಸುವುದಾಗಿ ಹೇಳುತ್ತಾ ಬಂದ ಸಿಎಂ ಸ್ಟಾಲಿನ್ ಅವರ ಅಧಿಕಾರಾವಧಿಯಲ್ಲಿ ಇದು ನಡೆದಿದೆ" ಎಂದು ಅವರು ಹೇಳಿದ್ದಾರೆ. ಡಿಎಂಕೆ ತನ್ನ ಟೀಕಾಕಾರರನ್ನು ದಮನಿಸುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News