ಚತ್ತೀಸ್‌ಗಢ: ಮೂವರು ಶಂಕಿತ ಮಾವೋವಾದಿಗಳ ಹತ್ಯೆ

ಸಾಂದರ್ಭಿಕ ಚಿತ್ರ | PC : ANI
ರಾಯಪುರ: ಚತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆ ಮಂಗಳವಾರ ಮೂವರು ಶಂಕಿತ ಮಾವೋವಾದಿಗಳನ್ನು ಹತ್ಯೆಗೈದಿದೆ ಎಂದು ಬಸ್ತಾರ್ ಪೊಲೀಸರು ತಿಳಿಸಿದ್ದಾರೆ.
ಮಾವೋವಾದಿಗಳ ಇರುವಿಕೆ ಕುರಿತು ನಿರ್ದಿಷ್ಟ ಬೇಹುಗಾರಿಕೆ ಮಾಹಿತಿ ಆಧಾರದಲ್ಲಿ ಭದ್ರತಾ ಪಡೆ ಚತ್ತೀಸ್‌ಗಢದ ದಂತೇವಾಡ ಹಾಗೂ ಬಿಜಾಪುರ ಜಿಲ್ಲೆಗಳ ಗಡಿಯ ಅರಣ್ಯದಲ್ಲಿ ಮಾವೋವಾದಿಗಳ ವಿರುದ್ಧ ಬೆಳಗ್ಗೆ 8 ಗಂಟೆಗೆ ಶೋಧ ಕಾರ್ಯಾಚರಣೆ ಆರಂಭಿಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭ ಶಂಕಿತ ಮಾವೋವಾದಿಗಳು ಹಾಗೂ ಭದ್ರತಾ ಪಡೆ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಶಂಕಿತ ಮಾವೋವಾದಿಗಳು ಹತರಾದರು. ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಸ್ಪೋಟಕಗಳಲ್ಲದೆ, ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.
ಹತರಾದ ಮಾವೋವಾದಿಗಳ ಮೃತದೇಹದ ಗುರುತು ಇದುವರೆಗೆ ಪತ್ತೆಯಾಗಿಲ್ಲ. ಈ ಪ್ರದೇಶದಲ್ಲಿ ಮಾವೋವಾದಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.