ಉತ್ತರ ಪ್ರದೇಶ | ವಿವಾಹಿತ ಮಹಿಳೆಯ ಭಾವಚಿತ್ರಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಮಾಡಿದ ಆರೋಪ: ಫೋಟೋಗ್ರಾಫರ್ ಹತ್ಯೆ; ಇಬ್ಬರ ಬಂಧನ

Photo: Rueters Photo
ಬಲ್ಲಿಯಾ (ಉತ್ತರ ಪ್ರದೇಶ): ವಿವಾಹಿತ ಮಹಿಳೆಯೊಬ್ಬರ ಭಾವಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಮಾಡಿದ್ದರಿಂದ ಕುಪಿತಗೊಂಡ ಆಕೆಯ ಕುಟುಂಬದ ಸದಸ್ಯರು ಹಾಗೂ ಪತಿಯ ಕುಟುಂಬಸ್ಥರು, 24 ವರ್ಷದ ಫೋಟೋಗ್ರಾಫರ್ ಒಬ್ಬನನ್ನು ಇರಿದು ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಹಿಳೆಯ ಸಹೋದರ ಹಾಗೂ ಸೋದರ ಸಂಬಂಧಿಯನ್ನು ಬಂಧಿಸಲಾಗಿದೆ.
ಮಾರ್ಚ್ 18ರ ರಾತ್ರಿಯಂದು ಫೋಟೋಗ್ರಾಫರ್ ಚಂದನ್ ಬಿಂಡ್‌ಗೆ ಆಮಿಷವೊಡ್ಡಿ ಕೃಷಿ ಭೂಮಿಯೊಂದಕ್ಕೆ ಕರೆಸಿಕೊಂಡಿರುವ ಆರೋಪಿಗಳು, ಆತನಿಗೆ ಹಲವು ಬಾರಿ ಚಾಕುವಿನಿಂದು ಇರಿದು ಹತ್ಯೆಗೈದು, ನಂತರ, ಆತನ ಮೃತದೇಹವನ್ನು ಗೋಧಿ ಹೊಲವೊಂದರಲ್ಲಿ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಫೋಟೋಗ್ರಾಫರ್‌ನ ಮೃತ ದೇಹ ಐದು ದಿನಗಳ ನಂತರ, ಮಾರ್ಚ್ 23ರಂದು ಪತ್ತೆಯಾಗಿದ್ದು, ಇದರ ಬೆನ್ನಿಗೇ ಸೋಮವಾರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮೃತ ಚಂದನ್ ಬಿಂಡ್‌ನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ವೃತ್ತಾಧಿಕಾರಿ ಮುಹಮ್ಮದ್ ಫಹೀಮ್, "ಮುಖ್ಯ ಆರೋಪಿ ಸುರೇಂದ್ರ ಯಾದವ್‌ನ ಸಹೋದರಿಯು ವಿವಾಹವಾದ ನಂತರವೂ, ಆಕೆಯೊಂದಿಗೆ ಮೃತ ಚಂದನ್ ಬಿಂಡ್ ಸಂಪರ್ಕ ಹೊಂದಿದ್ದ. ಆಕೆ ತನ್ನ ಪತಿಯ ಮನೆಯಲ್ಲಿದ್ದಾಗಲೂ ಆಕೆಗೆ ಕರೆ ಮಾಡುವದನ್ನು ಮುಂದುವರಿಸಿದ್ದ ಆತ, ಆಕೆಯನ್ನು ಅಲ್ಲಿಯೇ ಭೇಟಿ ಮಾಡಲೂ ಪ್ರಯತ್ನಿಸಿದ್ದ. ಆದರೆ, ಆಕೆ ಅದಕ್ಕೆ ನಿರಾಕರಿಸಿದ್ದಳು. ಇದರಿಂದ ಅಸಮಾಧಾನಗೊಂಡ ಚಂದನ್ ಬಿಂಡ್, ಆಕೆಯ ಭಾವಚಿತ್ರಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಮಾಡಿದ್ದ. ಇದರಿಂದ ಮುಖ್ಯ ಆರೋಪಿ ಸುರೇಂದ್ರ ಯಾದವ್‌ನ ಸಹೋದರಿಯ ಕುಟುಂಬದಲ್ಲಿ ಜಗಳವಾಗಿತ್ತು. ಈ ಕುರಿತು ಆಕೆ ತನ್ನ ಕುಟುಂಬದ ಸದಸ್ಯರಿಗೆ ದೂರು ನೀಡಿದ ನಂತರ, ಮೃತ ಚಂದನ್ ಬಿಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸುರೇಂದ್ರ ಯಾದವ್ ತೀರ್ಮಾನಿಸಿದ್ದ" ಎಂದು ಹೇಳಿದ್ದಾರೆ.
ಹೋಳಿ ಹಬ್ಬದಂದು ಮೃತ ಚಂದನ್ ಬಿಂಡ್‌ನೊಂದಿಗೆ ಸ್ನೇಹದಿಂದ ವರ್ತಿಸಿದ್ದ ಸುರೇಂದ್ರ ಯಾದವ್, ಬೇರೊಬ್ಬರ ಫೋನ್‌ನಿಂದ ಆತನಿಗೆ ಆಮಿಷವೊಡ್ಡಿ, ಮಾರ್ಚ್ 18ರ ರಾತ್ರಿ ನಿರ್ಜನ ಹೊಲವೊಂದಕ್ಕೆ ಕರೆಸಿಕೊಂಡಿದ್ದ ಎಂದೂ ಅವರು ತಿಳಿಸಿದ್ದಾರೆ
ಹೊಲದ ಬಳಿಗೆ ಬಂದ ಚಂದನ್ ಬಿಂಡ್‌ನನ್ನು ಬಲವಾಗಿ ಹಿಡಿದುಕೊಂಡಿರುವ ಸುರೇಂದ್ರ ಯಾದವ್ ಹಾಗೂ ಆತನ ಸೋದರ ಸಂಬಂಧಿ ರೋಹಿತ್ ಯಾದವ್, ಆತನಿಗೆ ಹಲವು ಬಾರಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ. ನಂತರ ಆತನ ಮೃತ ದೇಹವನ್ನು ಗೋಧಿ ಹೊಲವೊಂದರಲ್ಲಿ ಎಸೆದು ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಆರೋಪಿಗಳಾದ ಸುರೇಂದ್ರ ಯಾದವ್, ಭಗವಾನ್, ಬಾಲು ಯಾದವ್, ದೀಪಕ್ ಯಾದವ್ (ಎಲ್ಗ ಆರೋಪಿಗಳೂ ಚಂದನ್ ಬಿಂಡ್‌ನ ಗ್ರಾಮದ ನಿವಾಸಿಗಳು) ಹಾಗೂ ಬಿಹಾರ ರಾಜ್ಯದ ಸರಣ್ ಜಿಲ್ಲೆಯ ಜಿವಾಸಿಯಾದ ಮಹಿಳೆಯ ಸೋದರ ಸಂಬಂಧಿ ರೋಹಿತ್ ಯಾದವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 (1) ಹಾಗೂ ಸೆಕ್ಷನ್ 238ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳು ತಮ್ಮ ಪುತ್ರನನ್ನು ತಮ್ಮ ಮನೆಗೆ ಕರೆದೊಯ್ದು ಹತ್ಯೆಗೈದ ನಂತರ, ಆತನ ಮೃತ ದೇಹವನ್ನು ಬಿಸಾಡಿದ್ದಾರೆ ಎಂದು ಮೃತ ಚಂದನ್ ಬಿಂಡ್‌ನ ತಂದೆ ಶ್ಯಾಮ್ ಬಿಹಾರಿ ಪ್ರಸಾದ್ ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ, ಸೋಮವಾರ ಸುರೇಂದ್ರ ಯಾದವ್ ಹಾಗೂ ರೋಹಿತ್ ಯಾದವ್‌ನನ್ನು ಬಂಧಿಸಲಾಗಿದ್ದು, ಇಬ್ಬರೂ ತಮ್ಮ ಅಪರಾಧ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ನಾವು ಮೂರು ಚಾಕುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ವೃತ್ತಾಧಿಕಾರಿ ಫಹೀಮ್ ತಿಳಿಸಿದ್ದಾರೆ.