ಹನ್ನೊಂದು ದಿನದಲ್ಲಿ 26 ಕೋಟಿ ರೂ. ದಾಟಿದ 'ಡಿಪ್ಲೊಮೇಟ್' ಗಳಿಕೆ

PC | stills from The Diplomat
ಮುಂಬೈ : ಜಾನ್ ಅಬ್ರಹಾಂ ಅವರ 'ಡಿಪ್ಲೊಮೇಟ್' ಚಿತ್ರ ಬಿಡುಗಡೆಯಾದ ಎರಡನೇ ವಾರವೂ ಗಣನೀಯ ಗಳಿಕೆ ದಾಖಲಿಸುತ್ತಿದೆ. ಚಿತ್ರ ಬಿಡುಗಡೆಯಾದ ಹನ್ನೊಂದನೇ ದಿನ ಅಂದರೆ ಎರಡನೇ ಸೋಮವಾರ ಗಳಿಕೆಯಲ್ಲಿ ಇಳಿಕೆ ಕಂಡುಬಂದಿದ್ದರೂ, ಇದುವರೆಗೆ ಚಿತ್ರದ ಗಳಿಕೆ 26 ಕೋಟಿ ರೂ. ದಾಟಿದೆ.
ಈ ಚಿತ್ರ ನೈಜ ಘಟನೆಯನ್ನು ಆಧರಿಸಿದ್ದು, ಭಾರತೀಯ ಬಾಲಕಿಯೊಬ್ಬಳನ್ನು ಸರ್ಕಾರಿ ಅಧಿಕಾರಿಗಳ ನೆರವಿನ ಮೂಲಕ ಪಾಕಿಸ್ತಾನದಿಂದ ರಕ್ಷಿಸಿದ ಕಥಾ ಹಂದರವನ್ನು ಹೊಂದಿದೆ. ರಾಜತಾಂತ್ರಿಕ ಅಧಿಕಾರಿ ಜೆ.ಪಿ.ಸಿಂಗ್ ಅವರ ಪಾತ್ರವನ್ನು ಜಾನ್ ನಿರ್ವಹಿಸಿದ್ದಾರೆ. ಮೊದಲ ದಿನ ಸಾಧಾರಣ ಅಂದರೆ ನಾಲ್ಕು ಕೋಟಿ ರೂ. ಗಳಿಕೆ ಮಾಡಿದ ಈ ಚಿತ್ರ ದಿನಗಳು ಮುಂದುವರಿದಂತೆ ಬಾಯಿಯಿಂದ ಬಾಯಿಗೆ ಪ್ರಚಾರವಾಗಿ ಗಳಿಕೆ ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಎರಡನೇ ವಾರ ಗಳಿಕೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದು, ಎರಡನೇ ಶನಿವಾರ ಮತ್ತು ಭಾನುವಾರ 5 ಕೋಟಿ ರೂ. ಗಳಿಸಿತು.
ಸ್ಕ್ಯಾನ್‍ಲಿಕ್ ವರದಿಯ ಪ್ರಕಾರ, ಮೊದಲ ವಾರಾಂತ್ಯಕ್ಕೆ ಚಿತ್ರದ ಗಳಿಕೆ 19.15 ಕೋಟಿ ರೂ. ಆಗಿತ್ತು. ಆದರೆ ಎರಡನೇ ಶನಿವಾರ ಮತ್ತು ಭಾನುವಾರ ಉತ್ತಮ ಪ್ರಗತಿ ಕಂಡುಬಂದಿದ್ದು, ಕ್ರಮವಾಗಿ ಈ ಎರಡು ದಿನಗಳಲ್ಲಿ 2.5 ಕೋಟಿ ರೂ. ಹಾಗೂ 2.75 ಕೋಟಿ ರೂ. ಆದಾಯ ಗಳಿಸಿದೆ. ಆದರೆ ಸೋಮವಾರ ಗಣನೀಯ ಇಳಿಕೆ ಕಂಡುಬಂದಿದ್ದು, ಆದಾಯ 90 ಲಕ್ಷಕ್ಕೆ ಕುಸಿದಿದೆ. ಹೀಗೆ ಒಟ್ಟು 26.55 ಕೋಟಿ ರೂ. ಗಳಿಸಿದೆ.
ವಿಕಿ ಕೌಶಲ್ ಅವರ 'ಛಾವಾ' ಚಿತ್ರಕ್ಕೆ ಆರನೇ ವಾರ ಕೂಡಾ ಉತ್ತಮ ಸ್ಪಂದನೆ ದೊರಕುತ್ತಿದೆ. ಆರನೇ ಶನಿವಾರ ಹಾಗೂ ಭಾನುವಾರ ಅಂದಾಜು 8 ಕೋಟಿ ರೂ. ಆದಾಯ ಗಳಿಸಿದೆ. ಸೋಮವಾರ ಕೂಡ ಡಿಪ್ಲೋಮ್ಯಾಟ್‍ಗಿಂತ ಉತ್ತಮ ಗಳಿಕೆ ದಾಖಲಿಸಿರುವ ಛಾವಾ ಆರನೇ ಸೋಮವಾರ 1.75 ಕೋಟಿ ರೂ. ಗಳಿಸಿದೆ. ಛಾವಾ ಚಿತ್ರದ ದೇಶೀಯ ಗಳಿಕೆ ಇದೀಗ 585 ಕೋಟಿ ರೂ. ಆಗಿದೆ.