ಅಗ್ನಿ ಅವಘಡದ ವೇಳೆ ಭಾರೀ ಪ್ರಮಾಣದಲ್ಲಿ ನೋಟಿನ ಕಂತೆ ಪತ್ತೆಯಾದ ನ್ಯಾಯಾಧೀಶರ ಮನೆಗೆ ತನಿಖಾ ತಂಡ ಭೇಟಿ

ಹೊಸದಿಲ್ಲಿ: ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ಮನೆಯಲ್ಲಿ ಸಂಭವಿಸಿದ ಬೆಂಕಿ ದುರಂತದ ವೇಳೆ ಭಾರಿ ಪ್ರಮಾಣದ ನೋಟಿನ ಕಂತೆಗಳು ಪತ್ತೆಯಾದ ಪ್ರಕರಣದ ವಿಚಾರಣೆ ಚುರುಕುಗೊಂಡಿದ್ದು, ಭಾರತದ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನೇಮಕ ಮಾಡಿದ ತನಿಖಾ ತಂಡ ಮಂಗಳವಾರ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ತುಘಲಕ್ ಕ್ರೆಸೆಂಟ್ ಬಂಗಲೆಗೆ ಮಧ್ಯಾಹ್ನ ಭೇಟಿ ನೀಡಿದ ತಂಡ 45 ನಿಮಿಷಗಳ ಕಾಲ ಅಲ್ಲಿದ್ದು ಪರಿಶೀಲನೆ ನಡೆಸಿತು. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿ.ಎಸ್.ಸಂಧೀವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶ್ರೀನಿವಾಸನ್ ಅವರಿದ್ದ ತಂಡ ನಗದು ಪತ್ತೆಯಾದ ಕೊಠಡಿಯನ್ನು ಪರಿಶೀಲನೆ ಮಾಡಿತು. ಪೊಲೀಸ್ ವಿಡಿಯೊ ಪ್ರಕಾರ ಈ ಕೊಠಡಿಯಲ್ಲಿ ನೋಟಿನ ಕಂತೆಗಳು ಪತ್ತೆಯಾಗಿದ್ದವು.
ಜತೆಗೆ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥ ಸೇರಿದಂತೆ ಯಾರನ್ನು ಕರೆಸಿಕೊಳ್ಳಬೇಕು ಎಂಬ ಬಗ್ಗೆಯೂ ಸಮಿತಿ ನಿರ್ಧರಿಸಿತು. ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥರು ದೆಹಲಿ ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಅವರ ಮುಂದೆ "ನ್ಯಾಯಮೂರ್ತಿ ನಿವಾಸದಲ್ಲಿ ಯಾವುದೇ ನಗದು ಪತ್ತೆಯಾಗಿಲ್ಲ" ಎಂದು ಹೇಳಿಕೆ ನೀಡಿದ್ದಾಗಿ ಉಲ್ಲೇಖಿಸಿದ್ದರು. ಆದರೆ ಈ ಹೇಳಿಕೆಯನ್ನು ಅಗ್ನಿಶಾಮಕ ದಳ ಮುಖ್ಯಸ್ಥರು ನಿರಾಕರಿಸಿ, ತಾವು ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ನ್ಯಾಯಮೂರ್ತಿ ವರ್ಮಾ ಅವರಲ್ಲದೇ, ಮಾರ್ಚ್ 14ರಂದು ರಾತ್ರಿ ನ್ಯಾಯಮೂರ್ತಿಗಳ ನಿವಾಸದ ಔಟ್ಹೌಸ್ನ ಉಗ್ರಾಣದಲ್ಲಿ ನಡೆದ ಬೆಂಕಿ ಅನಾಹುತಕ್ಕೆ ಸಂಬಂಧಿಸಿದಂತೆ ಕರೆ ಮಾಡಿದಾಗ ಮೊದಲು ಸ್ಪಂದಿಸಿದವರನ್ನು ಕೂಡಾ ತನಿಖಾ ತಂಡ ವಿಚಾರಣೆ ನಡೆಸಲಿದೆ. ಸಫ್ದರ್ಜಂಗ್ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮತ್ತು ತುಘಲಕ್ ರಸ್ತೆ ಪೊಲೀಸ್ ಠಾಣೆಯ ಸಿಬ್ಬಂದಿ ಕರೆಗೆ ಮೊದಲು ಸ್ಪಂದಿಸಿದ್ದರು.