ಗುಜರಾತ್ | ವಿವಾಹಿತ ಮಹಿಳೆಯೊಂದಿಗೆ ಪಲಾಯನ ಶಂಕೆ; ಯುವಕ, ಆತನ ಸಂಬಂಧಿಕರ ಮನೆಗಳ ಧ್ವಂಸ

ಸಾಂದರ್ಭಿಕ ಚಿತ್ರ | PC : freepik.com
ಭರೂಚ್: ವಿವಾಹಿತ ಮಹಿಳೆಯೊಂದಿಗೆ ಓಡಿ ಹೋಗಿದ್ದಾನೆ ಎಂದು ಶಂಕಿಸಿ ವ್ಯಕ್ತಿ ಹಾಗೂ ಆತನ ಸಂಬಂಧಿಕರ ಮನೆಗಳನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿದ ಆರೋಪದಲ್ಲಿ ಇಲ್ಲಿಂದ 6 ಮಂದಿ ಗ್ರಾಮಸ್ಥರನ್ನು ಬಂಧಿಸಲಾಗಿದೆ.
ಆರೋಪಿಗಳಲ್ಲಿ ಮಹಿಳೆಯ ಕುಟುಂಬದ ಸದಸ್ಯರು ಕೂಡ ಸೇರಿದ್ದಾರೆ. ಇನ್ನೊಂದು ಸಮುದಾಯಕ್ಕೆ ಸೇರಿದ ವ್ಯಕ್ತಿ ಮಹಿಳೆಯೊಂದಿಗೆ ಓಡಿ ಹೋಗಿದ್ದಾನೆ ಎಂದು ಶಂಕಿಸಿ ಅವರು ಬುಲ್ಡೋಜರ್ ಬಳಸಿ ಆ ಯುವಕ ಹಾಗೂ ಆತನ ಸಂಬಂಧಿಕರ ಮನೆಯನ್ನು ಧ್ವಂಸಗೊಳಿಸಲು ನಿರ್ಧರಿಸಿದರು ಎಂದು ವೇದಾಚ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಎಂ. ಚೌಧರಿ ತಿಳಿಸಿದ್ದಾರೆ.
ಗುಜರಾತ್ ಭರೂಚ್ ಜಿಲ್ಲೆಯ ಕರೇಲಿ ಗ್ರಾಮದಲ್ಲಿ ಮಾರ್ಚ್ 21ರಂದು ಈ ಘಟನೆ ನಡೆದಿದೆ. ಅಂದು ರಾತ್ರಿ ಆರೋಪಿಗಳು ಆ ವ್ಯಕ್ತಿ ಸೇರಿದಂತೆ ಫುಲ್ಮಲಿ ಸಮುದಾಯದ ಸದಸ್ಯರಿಗೆ ಸೇರಿದ 6 ಮನೆಗಳನ್ನು ನೆಲಸಮಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಬಳಿಕ ಪೊಲೀಸರು ಬುಲ್ಡೋಜರ್ ಚಾಲಕ ಸೇರಿದಂತೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಹಾಗೂ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ.
ಆನಂದ್ ಜಿಲ್ಲೆಯ ಅಂಕ್ಲಾವ್ ತಾಲೂಕಿನಲ್ಲಿರುವ ತನ್ನ ಹೆತ್ತವರ ಮನೆಗೆ ಭೇಟಿ ನೀಡಲು ಮಹಿಳೆ ಹೋಗಿದ್ದಳು. ಅಲ್ಲಿಂದ ಆಕೆ ಆತನೊಂದಿಗೆ ಪರಾರಿಯಾಗಿದ್ದಾಳೆ ಎಂದು ಚೌಧರಿ ತಿಳಿಸಿದ್ದಾರೆ.
ಮಹಿಳೆಯ ಪೋಷಕರು ದೂರು ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಆನಂದ್ ಪೊಲೀಸರು ತಿಳಿಸಿದ್ದಾರೆ.