ಬಿಹಾರ: ರೈಲ್ವೆ ನಿಲ್ದಾಣದಲ್ಲಿ ತಂದೆ ಮಗಳಿಗೆ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೈದ ಯುವಕ!

Screengrab:X
ಅರಾ: ಯುವಕನೊಬ್ಬ 16 ವರ್ಷದ ಬಾಲಕಿ ಹಾಗೂ ಆಕೆಯ ತಂದೆಯನ್ನು ಗುಂಡಿಕ್ಕಿ ಹತ್ಯೆಗೈದ ನಂತರ, ತಾನೂ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದ ಅರಾ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಸಂಜೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ಪ್ಲ್ಯಾಟ್ ಫಾರ್ಮ್ ಸಂಖ್ಯೆ 2 ಹಾಗೂ 3 ಅನ್ನು ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆಯ ಮೇಲೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಬಂದೂಕುಧಾರಿಯನ್ನು ಅಮನ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಭೋಜ್ ಪುರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಾಜ್ ತಿಳಿಸಿದ್ದಾರೆ.
ಆತ ಮೊದಲು ಬಾಲಕಿ ಹಾಗೂ ನಂತರ, ಆಕೆಯ ತಂದೆಯ ಮೇಲೆ ಗುಂಡಿನ ದಾಳಿ ನಡೆಸಿ, ನಂತರ ತಾನೂ ಗುಂಡಿಕ್ಕಿಕೊಂಡಿದ್ದಾನೆ. ಈ ಘಟನೆಯಲ್ಲಿ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
“ಈ ಘಟನೆಗೆ ಕಾರಣವೇನು ಎಂಬುದು ಇನ್ನಷ್ಟೆ ತಿಳಿದು ಬರಬೇಕಿದೆ. ಆದರೆ, ಪ್ರೇಮ ಪ್ರಕರಣದ ಆಯಾಮವನ್ನು ತಳ್ಳಿ ಹಾಕಲು ಸಾಧ್ಯವಿಲ್ಲ” ಎಂದೂ ಅವರು ತಿಳಿಸಿದ್ದಾರೆ.
ಘಟನೆಯ ಕುರಿತು ತನಿಖೆ ಪ್ರಾರಂಭಗೊಂಡಿದ್ದು, ಸ್ಥಳದಿಂದ ವಿಧಿವಿಜ್ಞಾನ ತಜ್ಞರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಮೃತ ಬಾಲಕಿಯು ದಿಲ್ಲಿಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣ ಬೆಳೆಸಲು ಅರಾ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಳು ಎಂದು ಹೇಳಲಾಗಿದೆ.