ದಿಶಾ ಸಾಲ್ಯಾನ್ ಸಾವಿನ ಪ್ರಕರಣ: ಆದಿತ್ಯ ಠಾಕ್ರೆ, ಮಾಜಿ ಉನ್ನತ ಪೊಲೀಸ್ ಅಧಿಕಾರಿ ಹಾಗೂ ಇನ್ನಿತರರ ವಿರುದ್ಧ ದೂರು

Update: 2025-03-25 21:44 IST
Disha Salian

ದಿಶಾ ಸಾಲ್ಯಾನ್ | PC : X 

  • whatsapp icon

ಮುಂಬೈ: ದಿಶಾ ಸಾವಿನ ಪ್ರಕರಣದಲ್ಲಿ ಶಿವಸೇನೆ (ಉದ್ಧವ್ ಬಣ) ಶಾಸಕ ಆದಿತ್ಯ ಠಾಕ್ರೆ, ಓರ್ವ ಮಾಜಿ ನಗರ ಪೊಲೀಸ್ ಆಯುಕ್ತ ಹಾಗೂ ಇನ್ನಿತರರು ಭಾಗಿಯಾಗಿದ್ದಾರೆ ಎಂದು ಮಂಗಳವಾರ ದಿಶಾ ಸಾಲಿಯಾನ್ ರ ತಂದೆಯ ಪರ ವಕೀಲರು ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ನಟ ದಿವಂಗತ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಮಾಜಿ ವ್ಯವಸ್ಥಾಪಕಿ ದಿಶಾ ಸಾಲ್ಯಾನ್ ಜೂನ್ 2020ರಲ್ಲಿ ಮುಂಬೈನ ಮಲಾಡ್ ನಲ್ಲಿರುವ ಗಗನಚುಂಬಿ ಕಟ್ಟಡವೊಂದರಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು.

ಇತ್ತೀಚೆಗೆ ತಮ್ಮ ಪುತ್ರಿಯ ಸಾವಿನ ಕುರಿತು ದಿಶಾರ ತಂದೆ ಮತ್ತೆ ಆರೋಪಿಸಿದ್ದರು. ತಮ್ಮ ಪುತ್ರಿಯ ಸಾವಿನ ಹಿಂದೆ ಪಿತೂರಿ ಅಡಗಿದೆ ಎಂದು ಆರೋಪಿಸಿದ್ದ ದಿಶಾ ಸಾಲಿಯಾನ್ ರ ತಂದೆ, ಈ ಸಾವಿನ ಹಿಂದೆ ಆದಿತ್ಯ ಠಾಕ್ರೆ ಹಾಗೂ ಮತ್ತಿತರರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ತಮ್ಮ ವಿರುದ್ಧದ ಈ ಆರೋಪಗಳನ್ನು ಶಿವಸೇನೆ (ಉದ್ಧವ್ ಬಣ) ಶಾಸಕರಾದ ಆದಿತ್ಯ ಠಾಕ್ರೆ ತಳ್ಳಿ ಹಾಕಿದ್ದರು.

ಮಂಗಳವಾರ ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ ದಿಶಾ ಸಾಲ್ಯಾನ್ ರ ತಂದೆಯ ಪರ ವಕೀಲರು, ತಮ್ಮ ದೂರಿನಲ್ಲಿ ಆದಿತ್ಯ ಠಾಕ್ರೆ ಹಾಗೂ ಅವರ ಅಂಗರಕ್ಷಕರು, ನಟರಾದ ಡಿನೊ ಮಾರಿಯಾ ಹಾಗೂ ಸೂರಜ್ ಪಂಚೋಲಿ, ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್, ಸೇವೆಯಿಂದ ವಜಾಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಹಾಗೂ ನಟಿ ರಿಯಾ ಚಕ್ರವರ್ತಿ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ನೀಲೇಶ್ ಓಝಾ, “ಇಂದು ನಾವು ಪೊಲೀಸ್ ಆಯುಕ್ತರು ಹಾಗೂ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದು, ಅದನ್ನು ಅಂಗೀಕರಿಸಲಾಗಿದೆ. ಈ ದೂರಿನಲ್ಲಿ ಆದಿತ್ಯ ಠಾಕ್ರೆ, ಡಿನೊ ಮಾರಿಯಾ, ಸೂರಜ್ ಪಂಚೋಲಿ ಹಾಗೂ ಅವರ ಅಂಗರಕ್ಷಕ, ಪರಂಬೀರ್ ಸಿಂಗ್, ಸಚಿನ್ ವಾಝೆ ಹಾಗೂ ರಿಯಾ ಚಕ್ರವರ್ತಿಯನ್ನು ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿದೆ” ಎಂದು ತಿಳಿಸಿದ್ದಾರೆ.

ದಿಶಾ ಸಾಲಿಯಾನ್ ಹಾಗೂ ಸುಶಾಂತ್ ಸಿಂಗ್ ರಜಪೂತ್ ರ ಸಾವಿನ ಸಂದರ್ಭದಲ್ಲಿ ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಪರಂಬೀರ್ ಸಿಂಗ್ ಅವರೇ ದಿಶಾ ಸಾಲಿಯಾನ್ ಸಾವಿನ ಪ್ರಕರಣವನ್ನು ಮುಚ್ಚಿಹಾಕಿದ ಪ್ರಮುಖ ಸೂತ್ರಧಾರ ಎಂದೂ ಅವರು ಗಂಭೀರವಾಗಿ ಆರೋಪಿಸಿದ್ದಾರೆ.

“ಈ ಪ್ರಕರಣವನ್ನು ಮುಚ್ಚಿ ಹಾಕುವಲ್ಲಿ ಪರಂಬೀರ್ ಸಿಂಗ್ ರೇ ಸೂತ್ರಧಾರರಾಗಿದ್ದಾರೆ. ಪತ್ರಿಕಾಗೋಷ್ಠಿಯೊಂದನ್ನು ನಡೆಸಿದ್ದ ಅವರು, ಆದಿತ್ಯ ಠಾಕ್ರೆಯನ್ನು ರಕ್ಷಿಸಲು ಸುಳ್ಳುಗಳನ್ನು ಹೆಣೆದಿದ್ದರು. ಮಾದಕ ದ್ರವ್ಯ ನಿಯಂತ್ರಣ ದಳದ ತನಿಖಾ ವರದಿಯ ಪ್ರಕಾರ, ಆದಿತ್ಯ ಠಾಕ್ರೆ ಮಾದಕ ದ್ರವ್ಯ ವ್ಯವಹಾರದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಈ ಮಾಹಿತಿಯನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರ ವ್ಯವಸ್ಥಾಪಕಿಯಾಗಿದ್ದ ದಿಶಾ ಸಾಲಿಯಾನ್, ಜೂನ್ 8, 2020ರಂದು ಮುಂಬೈನಲ್ಲಿರುವ ಗಗನಚುಂಬಿ ಕಟ್ಟಡವೊಂದರಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು. ಈ ಸಂಬಂಧ ಪೊಲೀಸರು ಆಕಸ್ಮಿಕ ಸಾವು ವರದಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News