ಕುನಾಲ್ ಕಾಮ್ರಾ-ಶಿವಸೇನೆ ವಿವಾದ | ಕ್ರಿಯೆ ಪ್ರತಿಕ್ರಿಯೆಯನ್ನು ಹುಟ್ಟು ಹಾಕುತ್ತದೆ: ಏಕನಾಥ್ ಶಿಂದೆ

ಏಕನಾಥ್ ಶಿಂದೆ, ಕುನಾಲ್ ಕಾಮ್ರಾ | Photo: indiatoday
ಮುಂಬೈ: ಸ್ಟ್ಯಾಂಡಪ್ ಕಾಮೆಡಿಯನ್ ಕುನಾಲ್ ಕಾಮ್ರಾರ ಸ್ಟುಡಿಯೊ ಮೇಲೆ ಶಿವಸೇನೆ (ಶಿಂದೆ ಬಣ) ಕಾರ್ಯಕರ್ತರು ದಾಳಿ ನಡೆಸಿದ ಕುರಿತು ತಮ್ಮ ಪ್ರಥಮ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ, ಕುನಾಲ್ ಕಾಮ್ರಾ ತಮ್ಮ ಕುರಿತು ಮಾಡಿರುವ ವಿಡಂಬನೆಯನ್ನು ಸುಪಾರಿ ಕೃತ್ಯಕ್ಕೆ ಹೋಲಿಸಿದ್ದಾರೆ. ಇದೇ ವೇಳೆ, ಯಾರಾದರೂ ಇತರರನ್ನು ವಿಡಂಬಿಸುವಾಗ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದರೆ, ಕ್ರಿಯೆಯು ಪ್ರತಿಕ್ರಿಯೆಯನ್ನು ಹುಟ್ಟು ಹಾಕುತ್ತದೆ ಎಂದು ಪರೋಕ್ಷವಾಗಿ ತಮ್ಮ ಪಕ್ಷದ ಕಾರ್ಯಕರ್ತರ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
ಕುನಾಲ್ ಕಾಮ್ರಾರ ವಿಡಂಬನೆ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಶಿಂದೆ, ವಾಕ್ ಸ್ವಾತಂತ್ರ್ಯವಿದ್ದರೂ, ಅದಕ್ಕೊಂದು ಮಿತಿ ಇರಬೇಕು ಎಂದು ಎಚ್ಚರಿಸಿದ್ದಾರೆ. ಬಿಬಿಸಿ ಮರಾಠಿ ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಈ ಹೇಳಿಕೆ ನೀಡಿದ್ದಾರೆ.
ತಮ್ಮ ಕಾರ್ಯಕ್ರಮದಲ್ಲಿ ಏಕನಾಥ್ ಶಿಂದೆಯ ರಾಜಕೀಯ ಜೀವನ ಪಯಣದ ಕುರಿತು ವಿಡಂಬನೆ ಮಾಡುವ ಮೂಲಕ, 36 ವರ್ಷದ ಸ್ಟ್ಯಾಂಡಪ್ ಕಾಮೆಡಿಯನ್ ಕುನಾಲ್ ಕಾಮ್ರಾ ಮಹಾರಾಷ್ಟ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.
ಬಾಲಿವುಡ್‌ನ ಬಹು ಜನಪ್ರಿಯ ಗೀತೆಯಾದ 'ದಿಲ್ ತೊ ಪಾಗಲ್ ಹೈ' ಗೀತೆಯ ನಕಲನ್ನು ಪ್ರಸ್ತುತ ಪಡಿಸಿದ್ದ ಕುನಾಲ್ ಕಾಮ್ರಾ, ಅದರಲ್ಲಿ ಏಕನಾಥ್ ಶಿಂದೆಯನ್ನು ಪರೋಕ್ಷವಾಗಿ ವಿಶ್ವಾಸ ದ್ರೋಹಿ ಎಂದು ವಿಡಂಬಿಸಿದ್ದರು. ಅಲ್ಲದೆ, ಶಿವಸೇನೆ ಹಾಗೂ ಎನ್‌ಸಿಪಿ ವಿಭಜನೆ ಸೇರಿದಂತೆ ಮಹಾರಾಷ್ಟ್ರದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತೂ ಅವರು ತಮಾಷೆ ಮಾಡಿದ್ದರು.
ಇದರ ಬೆನ್ನಿಗೇ, ಕುನಾಲ್ ಕಾಮ್ರಾರ ಕಾರ್ಯಕ್ರಮ ಆಯೋಜನೆಗೊಂಡಿದ್ದ ಮುಂಬೈನ ಖಾರ್ ಪ್ರದೇಶದಲ್ಲಿರುವ ಹ್ಯಾಬಿಟ್ಯಾಟ್ ಕಾಮಿಡಿ ಕ್ಲಬ್ ಮೇಲೆ ದಾಳಿ ನಡೆಸಿದ್ದ ಶಿಂದೆ ಬಣದ ಶಿವಸೇನೆ ಕಾರ್ಯಕರ್ತರು, ಸ್ಟುಡಿಯೊದಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು. ಇದರೊಂದಿಗೆ ಸ್ಟುಡಿಯೊ ಆವರಣದಲ್ಲಿದ್ದ ಹೊಟೆಲೊಂದರ ಮೇಲೂ ದಾಳಿ ನಡೆಸಿದ್ದರು.