ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹತ್ಯೆ ಪ್ರಕರಣ: ತಮಿಳುನಾಡು ಪೊಲೀಸ್ ಮುಖ್ಯಸ್ಥ ಹಾಗೂ ಜಿಲ್ಲಾಧಿಕಾರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್

Photo: Government of India
ಹೊಸದಿಲ್ಲಿ: ನಾಲ್ವರು ದುಷ್ಕರ್ಮಿಗಳ ಗುಂಪೊಂದು ಹಾಡಹಗಲೇ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಹತ್ಯೆಗೈದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸ್ ಮುಖ್ಯಸ್ಥ ಹಾಗೂ ತಿರುನಲ್ವೇಲಿ ಜಿಲ್ಲಾಧಿಕಾರಿಗೆ ಮಂಗಳವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್ ಜಾರಿಗೊಳಿಸಿದೆ.
ಘಟನೆಯ ಕುರಿತ ಮಾಧ್ಯಮ ವರದಿಗಳನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಲಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹೇಳಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಆಯೋಗವು, "ಮೃತ ವ್ಯಕ್ತಿಯು ಆ ಪ್ರದೇಶದಲ್ಲಿನ ವಕ್ಫ್ ಜಮೀನುಗಳ ಒತ್ತುವರಿಯ ವಿರುದ್ಧ ಹೋರಾಡುತ್ತಿದ್ದರು ಹಾಗೂ ಅವರು ಕೆಲವು ವ್ಯಕ್ತಿಗಳಿಂದ ಬೆದರಿಕೆ ಎದುರಿಸುತ್ತಿದ್ದರು ಎಂದು ವರದಿಯಾಗಿದೆ" ಎಂದು ತಿಳಿಸಿದೆ.
ಒಂದು ವೇಳೆ ವರದಿಯ ತುಣುಕು ಸತ್ಯವೇ ಆಗಿದ್ದರೆ, ಅದು ಮೃತ ವ್ಯಕ್ತಿಯ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದೂ ಆಯೋಗ ಅಭಿಪ್ರಾಯ ಪಟ್ಟಿದೆ.
ಹೀಗಾಗಿ, ಇನ್ನು ನಾಲ್ಕು ವಾರಗಳೊಳಗಾಗಿ ಈ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ತಮಿಳುನಾಡು ಪೊಲೀಸ್ ಮಹಾ ನಿರ್ದೇಶಕ ಹಾಗೂ ತಿರುನಲ್ವೇಲಿ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಮಾಧ್ಯಮ ವರದಿಯ ಪ್ರಕಾರ, ಪೊಲೀಸರ ನಿಷ್ಕ್ರಿಯತೆ ಹಾಗೂ ಗಂಭೀರ ನಿರ್ಲಕ್ಷ್ಯದಿಂದಾಗಿ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರ ಹತ್ಯೆ ನಡೆದಿದೆ ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.