ಆತ್ಮಸಾಕ್ಷಿಗೆ ಆಘಾತ : ಉತ್ತರ ಪ್ರದೇಶದ ತೆರವು ಕಾರ್ಯಾಚರಣೆ ವಿರುದ್ಧ ಸುಪ್ರೀಂ ಗರಂ

ಸುಪ್ರೀಂಕೋರ್ಟ್ | PC : PTI
ಹೊಸದಿಲ್ಲಿ : ಪ್ರಯಾಗ್‍ರಾಜ್‍ನಲ್ಲಿ ನೋಟಿಸ್ ನೀಡಿದ 24 ಗಂಟೆಗಳಲ್ಲೇ ಮನೆಗಳನ್ನು ಧ್ವಂಸಗೊಳಿಸಿದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಸೋಮವಾರ ಚಾಟಿ ಬೀಸಿದೆ. "ಇದು ಕೋರ್ಟ್‍ನ ಆತ್ಮಸಾಕ್ಷಿಗೆ ಆಘಾತ ತಂದಿದೆ" ಎಂದು ಹೇಳಿದೆ. ಜತೆಗೆ ತೆರವು ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಲ್ಲಿಸಿದ ದಾವೆಯ ಫಲಿತಾಂಶವನ್ನು ಅನುಸರಿಸಿ ಸಂತ್ರಸ್ತ ಕುಟುಂಬಗಳಿಗೆ ಮನೆಗಳನ್ನು ಪುನರ್ ನಿರ್ಮಿಸಿಕೊಳ್ಳಲು ಅವಕಾಶ ನೀಡುವ ಸುಳಿವು ನೀಡಿದೆ. ಈ ಪ್ರಕರಣ 2021ರಲ್ಲಿ ವಕೀಲ, ಪ್ರೊಫೆಸರ್ ಹಾಗೂ ಇತರರ ಮನೆಗಳನ್ನು ಧ್ವಂಸಗೊಳಿಸಿದ್ದಕ್ಕೆ ಸಂಬಂಧಿಸಿದ್ದಾಗಿದೆ.
ನ್ಯಾಯಮೂರ್ತಿಗಳಾದ ಅಭಯ್ ಓಕಾ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ, ಸಂತ್ರಸ್ತ ಕುಟುಂಬಗಳ ಪ್ರತಿಪಾದನೆಯ ಆಧಾರದಲ್ಲಿ, ಈ ತೆರವು ಕಾರ್ಯಾಚರಣೆಯು ಸರ್ಕಾರದ ದರ್ಪವನ್ನು ತೋರಿಸುತ್ತದೆ ಎಂದು ಹೇಳಿದೆ. "ನೋಟಿಸ್ ನೀಡಿದ ಕೇವಲ 24 ಗಂಟೆಯಲ್ಲಿ ಮನೆಗಳನ್ನು ಧ್ವಂಸಗೊಳಿಸಿರುವುದು ಕೋರ್ಟ್‍ನ ಆತ್ಮಸಾಕ್ಷಿಯನ್ನು ಘಾಸಿಗೊಳಿಸುವಂಥದ್ದು" ಎಂದು ಬಣ್ಣಿಸಿದೆ.
ಆದರೆ ಉತ್ತರ ಪ್ರದೇಶ ಸರ್ಕಾರ ಸಂತ್ರಸ್ತರ ಪ್ರತಿಪಾದನೆಯನ್ನು ಅಲ್ಲಗಳೆದಿದ್ದು, ನೋಟಿಸ್ ನೀಡಿದ ಒಂದು ದಿನದ ಬಳಿಕ ತೆರವು ಕಾರ್ಯಾಚರಣೆಗೆ ತಂಡ ತೆರಳಿದೆ ಎಂದು ಸ್ಪಷ್ಟಪಡಿಸಿದೆ.
ನೋಟಿಸ್‍ಗೆ ಉತ್ತರಿಸಲು ಅರ್ಜಿದಾರರಿಗೆ ನ್ಯಾಯಸಮ್ಮತ ಕಾಲಾವಕಾಶ ನೀಡಲಾಗಿದೆ. 2020ರ ಡಿ.8ರಂದು ಮೊದಲ ನೋಟಿಸ್ ನೀಡಲಾಗಿತ್ತು. 2021ರ ಜನವರಿ ಹಾಗೂ ಮಾರ್ಚ್‍ನಲ್ಲಿ ಮತ್ತೆ ನೋಟಿಸ್‍ಗಳನ್ನು ನೀಡಲಾಗಿದೆ. ಮಾ.1ರ ತೆರವು ಕಾರ್ಯಾಚರಣೆ ನೋಟಿಸನ್ನು ಮಾ. 6ರಂದು ನೀಡಲಾಗಿದೆ ಎನ್ನುವುದು ಅರ್ಜಿದಾರರ ವಾದ. ಧ್ವಂಸ ಕಾರ್ಯಾಚರಣೆಯನ್ನು ಮಾ.7ರಂದು ಕೈಗೊಳ್ಳಲಾಗಿದೆ ಎಂದು ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಸ್ಪಷ್ಟಪಡಿಸಿದರು.