ಉತ್ತರ ಪ್ರದೇಶ: ಬೈಕ್ ಢಿಕ್ಕಿಯಾಗಿದ್ದಕ್ಕೆ ದಲಿತ ವ್ಯಕ್ತಿಗೆ ಹಲ್ಲೆ ನಡೆಸಿ ಒತ್ತೆಯಾಳಾಗಿರಿಸಿಕೊಂಡ ಗುಂಪು

ಸಾಂದರ್ಭಿಕ ಚಿತ್ರ (PTI)
ಭದೋಹಿ: ದಲಿತ ಯುವಕನೊಬ್ಬ ಚಲಾಯಿಸುತ್ತಿದ್ದ ಬೈಕ್ ಒಂದು ಮತ್ತೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದರಿಂದ ಕುಪಿತಗೊಂಡ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿ, ಆತನ ವಿರುದ್ಧ ಜಾತಿ ನಿಂದನೆ ಮಾಡಿ, ಒತ್ತೆಯಾಳಾಗಿರಿಸಿಕೊಂಡಿದ್ದ ಘಟನೆ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 10ರಂದು ಈ ಅಪಘಾತ ಸಂಭವಿಸಿದ್ದು, ಈ ವೇಳೆ ಪ್ರಯಾಗ್ ರಾಜ್ ನ ಹಂಡಿಯಾ ಗ್ರಾಮದಲ್ಲಿರುವ ತನ್ನ ನಿವಾಸಕ್ಕೆ ಸಂತ್ರಸ್ತ ಯುವಕ ಸಂಗಮ್ ಲಾಲ್ ಗೌತಮ್ ಬೈಕ್ ನಲ್ಲಿ ಮರಳುತ್ತಿದ್ದ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಂಗ್ಲೀಕ್, “ಬೆರ್ವಾ ಪಹಾರ್ಪುರ್ ಬಳಿ ತಪ್ಪು ದಿಕ್ಕಿನಲ್ಲಿ ಚಲಿಸುತ್ತಿದ್ದ ರಿಷಭ್ ಪಾಂಡೆಯ ದ್ವಿಚಕ್ರ ವಾಹನವು ಸಂಗಮ್ ಲಾಲ್ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಈ ವೇಳೆ ಸಂಗಮ್ ಲಾಲ್ ಗೆ ಗಂಭೀರ ಸ್ವರೂಪದ ಗಾಯಗಳಾಗಿವೆ” ಎಂದು ತಿಳಿಸಿದ್ದಾರೆ.
“ಸಂಗಮ್ ಲಾಲ್ ನ ಜಾತಿ ಬಗ್ಗೆ ತಿಳಿಯುತ್ತಿದ್ದಂತೆಯೇ ತನ್ನ ತಂದೆಯೊಂದಿಗೆ ರಿಷಭ್ ಹಾಗೂ ಇನ್ನಿತರ 10 ಮಂದಿ ಅಪರಿಚಿತರು ಗಾಯಗೊಂಡಿದ್ದ ಸಂಗಮ್ ಲಾಲ್ ನನ್ನು ಜಾತಿ ಬೈಗುಳಗಳೊಂದಿಗೆ ನಿಂದಿಸಿದ್ದಾರೆ. ಆತ ಮದ್ಯಪಾನ ಮಾಡಿ ಬೈಕ್ ಚಲಾಯಿಸುತ್ತಿದ್ದ ಆರೋಪಿಸಿರುವ ಗುಂಪು, ಆತನ ಮೇಲೆ ಹಲ್ಲೆ ನಡೆಸಿದೆ” ಎಂದು ಅವರು ಹೇಳಿದ್ದಾರೆ.
ನಂತರ, ಸಂತ್ರಸ್ತ ಯುವಕನನ್ನು ಒತ್ತೆಯಾಳಾಗಿರಿಸಿಕೊಂಡಿರುವ ರಿಷಭ್ ಪಾಂಡೆ, ತನ್ನ ಬೈಕ್ ಗೆ ಆಗಿರುವ ಹಾನಿಗಾಗಿ ಆತನಿಂದ 20,000 ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾನೆ. ಸುಮಾರು ಗಂಟೆಗಳ ನಂತರ, ತನ್ನ ತಂದೆ ನಾರಾಯಣ್ ದಾಸ್ ಗೌತಮ್ ರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿರುವ ಸಂಗಮ್ ಲಾಲ್, ನಡೆದ ಘಟನೆಯ ಕುರಿತು ಅವರಿಗೆ ತಿಳಿಸಿದ್ದಾನೆ. ಕೂಡಲೇ ಅವರು ತುರ್ತು ಸೇವೆಗಳಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸಂಗಮ್ ಲಾಲ್ ನನ್ನು ರಕ್ಷಿಸಿ, ಆತನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಮಾರ್ಚ್ 22ರಂದು ಆತ ನೀಡಿದ ದೂರನ್ನು ಆಧರಿಸಿ, ರಿಷಭ್ ಪಾಂಡೆ, ಪವನ್ ಪಾಂಡೆ ಹಾಗೂ ಇನ್ನಿತರ 10 ಮಂದಿ ಅಪರಿಚಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಕೊಯಿರೌನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಯ ಕುರಿತು ತನಿಖೆಗೆ ಚಾಲನೆ ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಂಗ್ಲೀಕ್ ತಿಳಿಸಿದ್ದಾರೆ.