50 ಕೋಟಿ ಪಾವತಿ ಪ್ರಕರಣ: ನ್ಯಾಯಾಧೀಶರ ಆಸ್ತಿ ಮುಟ್ಟುಗೋಲು ಹಾಕಿದ ಈಡಿ

Photo: Facebook/ED
ಹೊಸದಿಲ್ಲಿ: ಪಾಟ್ನಾದ ರೈಲ್ವೆ ಕ್ಲೇಮ್ ಗಳ ನ್ಯಾಯಮಂಡಳಿ ನ್ಯಾಯಾಧೀಶ ಆರ್.ಕೆ.ಮಿತ್ತಲ್ ಅವರ ನಿವಾಸ ಮತ್ತು ಅವರ ಸಹಚರರ ನಿವಾಸಗಳ ಮೇಲೆ ದಾಳಿ ಮಾಡಿದ ಎರಡು ತಿಂಗಳ ಬಳಿಕ ಕಾನೂನು ಜಾರಿ ನಿರ್ದೇಶನಾಲಯ ಆರೋಪಿಗಳಿಗೆ ಸೇರಿದ 24 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. 50 ಕೋಟಿ ರೂಪಾಯಿಗಳನ್ನು ಸಾವು ಪರಿಹಾರ ನಿಧಿಯಿಂದ ಅಕ್ರಮವಾಗಿ ತೆಗೆದಿರುವ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನ್ಯಾಯಾಧೀಶರ ಲಂಚ ಹಗರಣಗಳಿಗೆ ಸಂಬಂಧಿಸಿದಂತೆ ಅಥವಾ ತಮ್ಮ ಪರವಾಗಿ ತೀರ್ಪು ಪಡೆಯುವ ಸಲುವಾಗಿ ಅನುಕೂಲಕರ ನ್ಯಾಯಪೀಠಕ್ಕೆ ತಮ್ಮ ಪ್ರಕರಣ ನಿಯೋಜನೆಯಾಗುವಂತೆ ಫಿಕ್ಸಿಂಗ್ ಮಾಡಿಕೊಳ್ಳುವ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. ಇದರ ಜತೆಗೆ ನ್ಯಾಯಾಧೀಶರ ಹಿತಾಸಕ್ತಿ ಸಂಘರ್ಷಗಳು ಮತ್ತು ಅವರಿಗೆ ಲಂಚ ನೀಡುವ ಪ್ರಯತ್ನಗಳ ಬಗ್ಗೆಯೂ ಕಣ್ಗಾವಲು ಇರಿಸಿದೆ.
ರಿಯಲ್ ಎಸ್ಟೇಟ್ ಡೆವಲಪರ್ ಐಆರ್ ಇಓ ಮತ್ತು ಪ್ರವರ್ತಕ ಲಲಿತ್ ಗೋಯಲ್ ಎಂಬಾತನಿಗೆ ಹಣ ದುರುಪಯೋಗ ಪ್ರಕರಣವೊಂದರಲ್ಲಿ ಅನುಕೂಲ ಮಾಡಿಕೊಟ್ಟ ಆರೋಪದಲ್ಲಿ ಕಾನೂನು ಜಾರಿ ನಿರ್ದೇಶನಾಲಯ 2023ರ ಆಗಸ್ಟ್ 10ರಂದು ಪಂಚಕುಲದ ಮಾಜಿ ವಿಶೇಷ ನ್ಯಾಯಾಧೀಶ ಸುಧೀರ್ ಪರ್ಮಾರ್ ಅವರನ್ನು ಬಂಧಿಸಿತ್ತು.
ಪರ್ಮಾರ್ ಅವರನ್ನು ಬಂಧಿಸುವ ಒಂದು ತಿಂಗಳು ಮುನ್ನ ಗೋಯಲ್ನನ್ನು ಬಂಧಿಸಲಾಗಿತ್ತು. ಜಾರಿ ನಿರ್ದೇಶನಾಲಯ ಪುರಾವೆಗಳನ್ನು ಒದಗಿಸಿದ ಬಳಿಕ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್, ಕಳಂಕಿತ ನ್ಯಾಯಾಧೀಶರನ್ನು ಅಮಾನತು ಮಾಡಿತ್ತು.