'ನಾನು ಕ್ಷಮೆಯಾಚಿಸುವುದಿಲ್ಲ': 'ಗದ್ದಾರ್' ಜೋಕ್ ವಿವಾದಕ್ಕೆ ಕಮಿಡಿಯನ್ ಕುನಾಲ್ ಕಾಮ್ರಾ ಪ್ರತಿಕ್ರಿಯೆ

ಕುನಾಲ್ ಕಾಮ್ರಾ
ಹೊಸದಿಲ್ಲಿ: "ನಾನು ಕ್ಷಮೆಯಾಚಿಸುವುದಿಲ್ಲ" ಎಂದು ಮುಂಬೈನ ಹ್ಯಾಬಿಟ್ಯಾಟ್ ಸ್ಟುಡಿಯೋದಲ್ಲಿ ತಮ್ಮ ಕಾರ್ಯಕ್ರಮದಿಂದ ಉಂಟಾದ ವಿವಾದಕ್ಕೆ ಸೋಮವಾರ ಸ್ಟ್ಯಾಂಡ್-ಅಪ್ ಕಮಿಡಿಯನ್ ಕುನಾಲ್ ಕಾಮ್ರಾ ಪ್ರತಿಕ್ರಿಯಿಸಿದ್ದಾರೆ.
ದಿಲ್ ತೋ ಪಾಗಲ್ ಹೈ ಚಿತ್ರದ ಜನಪ್ರಿಯ ಹಿಂದಿ ಹಾಡನ್ನು ಕುನಾಲ್ ಕಾಮ್ರಾ ವಿಡಂಬನೆ ಮಾಡಿ, ಏಕನಾಥ್ ಶಿಂಧೆಯನ್ನು "ಗದ್ದರ್" (ದ್ರೋಹಿ) ಎಂದು ಉಲ್ಲೇಖಿಸಿದ ಬಳಿಕ ವಿವಾದ ಹುಟ್ಟಿಕೊಂಡಿತು. ಬಳಿಕ ಶಿಂಧೆ ನೇತೃತ್ವದ ಶಿವಸೇನೆಯ ಕಾರ್ಯಕರ್ತರಿಂದ ಪ್ರತಿಭಟನೆಗಳು, ಕಾರ್ಯಕ್ರಮ ನಡೆದ ಸ್ಥಳದಲ್ಲಿ ದಾಂಧಲೆ ಮಾಡಿದ ಘಟನೆಗಳು ನಡೆದವು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿನ ತಮ್ಮ ಖಾತೆಯಲ್ಲಿ ಸರಣಿ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿದ ಕಮಿಡಿಯನ್ ಕುನಾಲ್ ಕಾಮ್ರಾ, "ಮನರಂಜನಾ ಸ್ಥಳ ಹ್ಯಾಬಿಟ್ಯಾಟ್ ಎಲ್ಲಾ ರೀತಿಯ ಪ್ರದರ್ಶನಗಳಿಗೆ ಕೇವಲ ಒಂದು ವೇದಿಕೆಯಾಗಿದೆ. ಅದು ನನ್ನ ಹಾಸ್ಯಕ್ಕೆ ಜವಾಬ್ದಾರನಾಗಿರುವುದಿಲ್ಲ, ಅಥವಾ ನಾನು ಏನು ಹೇಳುತ್ತೇನೆ ಅಥವಾ ಮಾಡುತ್ತೇನೆ ಎಂಬುದರ ಮೇಲೆ ಅದು ಯಾವುದೇ ಅಧಿಕಾರ ಅಥವಾ ನಿಯಂತ್ರಣವನ್ನು ಹೊಂದಿಲ್ಲ. ಯಾವುದೇ ರಾಜಕೀಯ ಪಕ್ಷಕ್ಕೂ ನಿಯಂತ್ರಿಸುವ ಅಧಿಕಾರ ಇಲ್ಲ. ನಮ್ಮ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಕೇವಲ ಪ್ರಭಾವಿಗಳು ಮತ್ತು ಶ್ರೀಮಂತರನ್ನು ಮೆಚ್ಚಿಸಲು ಮಾತ್ರ ಬಳಸಲಾಗುವುದಿಲ್ಲ", ಎಂದು ರಾಜಕೀಯ ನಾಯಕರಿಗೆ ನೀಡಿರುವ ತನ್ನ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.
ಕಾರ್ಯಕ್ರಮ ನೀಡಿದ್ದ ಸ್ಥಳವನ್ನು ಧ್ವಂಸ ಮಾಡಿದವರಿಗೂ ಕಾನೂನು ಸಮಾನವಾಗಿ ಅನ್ವಯಿಸುತ್ತದೆಯೇ ಎಂದು ಕಾಮ್ರಾ ಪ್ರಶ್ನಿಸಿದ್ದಾರೆ. "ನನ್ನ ವಿರುದ್ಧ ತೆಗೆದುಕೊಂಡ ಯಾವುದೇ ಕಾನೂನುಬದ್ಧ ಕ್ರಮಕ್ಕಾಗಿ ನಾನು ಪೊಲೀಸರು ಮತ್ತು ನ್ಯಾಯಾಲಯಗಳೊಂದಿಗೆ ಸಹಕರಿಸಲು ಸಿದ್ಧನಿದ್ದೇನೆ. ಆದರೆ ತಮಾಷೆಗೆ ವಿಧ್ವಂಸಕ ಕೃತ್ಯವೇ ಸೂಕ್ತ ಪ್ರತಿಕ್ರಿಯೆ ಎಂದು ನಿರ್ಧರಿಸಿದವರ ವಿರುದ್ಧ, ಇಂದು ಹ್ಯಾಬಿಟ್ಯಾಟ್‌ಗೆ ಮಾಹಿತಿ ನೀಡದೇ ಆಗಮಿಸಿ ಸುತ್ತಿಗೆಯಿಂದ ಸ್ಥಳವನ್ನು ಕೆಡವಿದ BMC ಯ ಆಯ್ಕೆಯಾಗದ ಸದಸ್ಯರ ವಿರುದ್ಧ ನ್ಯಾಯಯುತವಾಗಿ ಮತ್ತು ಸಮಾನವಾಗಿ ಕ್ರಮ ತೆಗೆದುಕೊಳ್ಳಲಾಗುವುದೇ? ಬಹುಶಃ ನನ್ನ ಮುಂದಿನ ಕಾರ್ಯಕ್ರಮಕ್ಕೆ ನಾನು ಎಲ್ಫಿನ್‌ಸ್ಟೋನ್ ಸೇತುವೆ ಅಥವಾ ಮುಂಬೈನಲ್ಲಿರುವ ತ್ವರಿತವಾಗಿ ಕೆಡವುವ ಅಗತ್ಯವಿರುವ ಯಾವುದೋ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಿದ್ದೇನೆ”, ಎಂದು ಕುನಾಲ್ ಕಾಮ್ರಾ ಮಾರ್ಮಿಕವಾಗಿ ನುಡಿದಿದ್ದಾರೆ.