ಉತ್ತರ ಪ್ರದೇಶ: ಟ್ರಕ್‌ಗೆ ಬೆಂಕಿ, 300ಕ್ಕೂ ಅಧಿಕ ಎಲ್‌ಪಿಜಿ ಸಿಲಿಂಡರ್‌ಗಳ ಸ್ಫೋಟ
ಸಾಂದರ್ಭಿಕ ಚಿತ್ರ | PC : PTI
ಬರೇಲಿ: ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಅಡುಗೆ ಅನಿಲ ವಿತರಣಾ ಏಜೆನ್ಸಿಯೊಂದರ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡು, ಅದರಲ್ಲಿದ್ದ 300ಕ್ಕೂ ಅಧಿಕ ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡ ಘಟನೆ ಮಂಗಳವಾರ ನಡೆದಿದೆ. ಆದರೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲವೆಂದು ತಿಳಿದುಬಂದಿದೆ.
345ಕ್ಕೂ ಅಧಿಕ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕೊಂಡೊಯ್ಯುತ್ತಿದ್ದ ಮಹಾಲಕ್ಷ್ಮಿ ಗ್ಯಾಸ್ ಏಜೆನ್ಸಿ ಒಡೆತನದ ಈ ಟ್ರಕ್‌ಗೆ ಬಿತ್ರಿ ಚೈನ್‌ಪುರ ಪ್ರದೇಶದಲ್ಲಿರುವ ರಾಜಾವು ಪರಸ್‌ಪುರ ಗ್ರಾಮದ ಬಳಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತ್ತು.
ಅಗ್ನಿಜ್ವಾಲೆಗಳಿಂದಾಗಿ ಟ್ರಕ್‌ನಲ್ಲಿದ್ದ ಸಿಲಿಂಡರ್‌ಗಳು ಒಂದೊಂದಾಗಿ ಸ್ಪೋಟಗೊಂಡಿದ್ದು, ಆಸುಪಾಸಿನ ಗ್ರಾಮಗಳ ನಿವಾಸಿಗಳಲ್ಲಿ ಭೀತಿಯನ್ನು ಸೃಷ್ಟಿಸಿತು. ಘಟನೆಯ ಮಾಹಿತಿ ದೊರೆತ ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು ಹಾಗೂ ಎರಡೂವರೆ ತಾಸುಗಳ ಪ್ರಯತ್ನದ ಬಳಿಕ ಅವರು ಅಗ್ನಿಜ್ವಾಲೆಯನ್ನು ನಂದಿಸುವಲ್ಲಿ ಸಫಲರಾದರು ಎಂದು ಹೆಚ್ಚುವರಿ ಪೊಲೀಸ್ ಆಧೀಕ್ಷಕ (ಎಎಸ್‌ಪಿ) ಮುಕೇಶ್ ಚಂದ್ರ ಮಿಶ್ರಾ ತಿಳಿಸಿದ್ದಾರೆ.
ಸ್ಫೋಟದ ಸದ್ದು ಮೂರು ಕಿ.ಮೀ. ದೂರದವರೆಗೂ ಕೇಳಿಬರುತ್ತಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ ಹಾಗೂ ಸ್ಫೋಟದ ಸ್ಥಳದಿಂದ ಅರ್ಧ ಕಿ.ಮೀ. ದೂರದವರೆಗೂ ಸಿಲಿಂಡರ್‌ಗಳ ಚೂರುಗಳು ಚದುರಿಬಿದ್ದಿದ್ದವು ಎಂದು ತಿಳಿಸಿದರು.
ಸ್ಫೋಟದ ಬಳಿಕ ಗ್ಯಾಸ್‌ಏಜೆನ್ಸಿಯ ದಾಸ್ತಾನು ಮಳಿಗೆಯ ಸಮೀಪದ ಪ್ರದೇಶಗಳ ಗ್ರಾಮಸ್ಥರು ಸ್ಥಳವನ್ನು ತೊರೆದು ಹೋಗಿದ್ದಾರೆಂದು ಎಎಸ್‌ಪಿ ಮಿಶ್ರಾ ಅವರು ತಿಳಿಸಿದ್ದಾರೆ.