ಗುಜರಾತ್: ಬಿಜೆಪಿ ಶಾಸಕರ ಅಪಮಾನಕಾರಿ ಹೇಳಿಕೆಗಳ ವಿರುದ್ಧ ಸ್ಪೀಕರ್ ರಕ್ಷಣೆ ಕೋರಿದ ಏಕೈಕ ಮುಸ್ಲಿಂ ಶಾಸಕ
ಇಮ್ರಾನ್ ಖೇಡವಾಲಾ | PC : indianexpress.com
ಹೊಸದಿಲ್ಲಿ: ಬಿಜೆಪಿ ಶಾಸಕರು ತನ್ನ ಬಗ್ಗೆ ಅಪಮಾನಕಾರಿ ಉಲ್ಲೇಖಗಳನ್ನು ಮಾಡುವುದರ ವಿರುದ್ಧ ತನಗೆ ರಕ್ಷಣೆ ನೀಡಬೇಕೆಂದು ಗುಜರಾತ್ ವಿಧಾನಸಭೆಯ ಏಕೈಕ ಮುಸ್ಲಿಂ ಶಾಸಕ ಇಮ್ರಾನ್ ಖೇಡವಾಲಾ ಅವರು ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸ್ಪೀಕರ್ ಶಂಕರ್ ಚೌಧುರಿ ಅವರು ಯಾವುದೇ ಶಾಸಕರ ಬಗ್ಗೆ ವೈಯಕ್ತಿಕ ಉಲ್ಲೇಖಗಳನ್ನು ಮಾಡದಂತೆ ಎಲ್ಲಾ ಶಾಸಕರನ್ನು ಆಗ್ರಹಿಸಿದ್ದಾರೆ.
ತನ್ನನ್ನು ನಿರ್ದಿಷ್ಟ ಸಮುದಾಯಕ್ಕೆ ಸೇರಿದವನೆಂದು ಬಿಜೆಪಿ ಶಾಸಕರು ಸದನದಲ್ಲಿ ಬಣ್ಣಿಸುವುದಕ್ಕೆ ಕಾಂಗ್ರೆಸ್ ಪಕ್ಷದ ಮುಸ್ಲಿಂ ಶಾಸಕ ಇಮ್ರಾನ್ ಖೇಡವಾಲಾ ಅವರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಸ್ಪೀಕರ್ ಈ ಹೇಳಿಕೆ ನೀಡಿದ್ದಾರೆ.
ಗುಜರಾತ್ ವಿಧಾನಸಭೆಯಲ್ಲಿ ಸೋಮವಾರ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಖೇಡವಾಲಾ ಅವರು ಅಹ್ಮದಾಬಾದ್‌ನ ವಿಶಾಲ್ ರೋಡ್ ಹಾಗೂ ಸರ್ಖೇಜ್ ಕ್ರಾಸ್‌ರೋಡ್ ನಡುವೆ ಪ್ರಸ್ತಾವಿತ ಸೇತುವೆ ನಿರ್ಮಾಣದ ಕಾಮಗಾರಿ ಯಾವಾಗ ಆರಂಭಗೊಳ್ಳಲಿದೆಯೆಂಬ ಹಾಗೂ ಪೂರ್ಣಗೊಳ್ಳಲಿದೆಯೆಂಬ ಬಗ್ಗೆ ಮಾಹಿತಿ ಕೋರಿದ್ದರು. ಈ ಸೇತುವೆ ರಸ್ತೆಯು ಅಹ್ಮದಾಬಾದ್‌ನ ಮುಸ್ಲಿಂ ಬಾಹುಳ್ಯದ ಪ್ರದೇಶಗಳಾದ ಜುಹಾಪುರ ಹಾಗೂ ಸಾರ್ಖೆಜ್ ಪ್ರದೇಶಗಳನ್ನು ಹಾದುಹೋಗುತ್ತದೆ.
ಇದಕ್ಕೆ ಉತ್ತರಿಸಿದ್ದ ಸಚಿವ ಜಗದೀಶ್‌ವಿಶ್ವಕರ್ಮ ಅವರು ಸೇತುವೆ ನಿರ್ಮಾಣ ಕಾಮಗಾರಿ ಆರಂಭ ಹಾಗೂ ಮುಕ್ತಾಯ ಇವೆರಡೂ,ರಸ್ತೆಯಲ್ಲಿ ಆಗಿರುವ ಅತಿಕ್ರಣಗಳ ಸಂಖ್ಯೆ ಸೇರಿದಂತೆ ಹಲವಾರು ಅಂಶಗಳನ್ನು ಅವಲಂಭಿಸಿರುತ್ತದೆ ಎಂದಿದ್ದರು.
‘‘ಇದೊಂದೇ ರಸ್ತೆಯಲ್ಲಿ 700ಕ್ಕೂ ಅಧಿಕ ಮಾಂಸದ ಲಾರಿಗಳು, ಅಂಗಡಿಗಳು ಹಾಗೂ ಕಿಯೋಸ್ಕ್‌ಗಳಿದ್ದು, 1200ಕ್ಕೂ ಅಧಿಕ ರಿಕ್ಷಾಗಳು ರಸ್ತೆಯಲ್ಲಿಯೇ ಇರುತ್ತವೆ. ನಿರ್ದಿಷ್ಟ ಸಮುದಾಯವೊಂದರ 11 ಗ್ಯಾರೇಜ್‌ಗಳು ಅಲ್ಲಿದ್ದು ಅವೆಲ್ಲವೂ ಅಕ್ರಮವಾದವು’’ ಎಂದು ವಿಶ್ವಕರ್ಮ ತಿಳಿಸಿದ್ದರು.
‘‘ ಹೀಗೆ ಇಡೀ ರಾಜ್ಯದಲ್ಲಿ ಕೇವಲ ಒಂದು ನಿರ್ದಿಷ್ಟ ಸಮುದಾಯವು ಮಾತ್ರವೇ ಅತಿಕ್ರಮಣಗಳನ್ನು ನಡೆಸುತ್ತಿದೆಯಾದರೆ, ಸನ್ಮಾನ್ಯ ಇಮ್ರಾನ್ ಭಾಯಿಯವರೇ, ಹೀಗಾಗಿ ನಿಮ್ಮ ಸಮುದಾಯವು ತಪ್ಪಾಗಿ ಅತಿಕ್ರಮಣಗಳನ್ನು ಮಾಡದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ’’ ಎಂದವರು ಇಮ್ರಾನ್ ಖೇಡವಾಲ್ ಅವರನ್ನು ಉಲ್ಲೇಖಿಸಿ ಹೇಳಿದ್ದರು.