ಕುನಾಲ್ ಕಾಮ್ರಾ ಕಾರ್ಯಕ್ರಮ ನೀಡಿದ ಸ್ಟುಡಿಯೊ ಧ್ವಂಸ ಪ್ರಕರಣ: 12 ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು
ಕುನಾಲ್ ಕಾಮ್ರಾ | PC : X
ಮುಂಬೈ: ಸ್ಟ್ಯಾಂಡಪ್ ಕಾಮೆಡಿಯನ್ ಕುನಾಲ್ ಕಾಮ್ರಾ ಕಾರ್ಯಕ್ರಮ ನಡೆಸಿದ್ದ ಹೋಟೆಲ್ ಆವರಣದಲ್ಲಿದ್ದ ಸ್ಟುಡಿಯೊವನ್ನು ಧ್ವಂಸಗೊಳಿಸಿದ ಆರೋಪ ಎದುರಿಸುತ್ತಿರುವ ರಾಹುಲ್ ಕನಾಲ್ ಸೇರಿದಂತೆ 12 ಮಂದಿ ಆರೋಪಿಗಳಿಗೆ ಮುಂಬೈನ ಬಾಂದ್ರಾದಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೊಂದು ಸೋಮವಾರ ಜಾಮೀನು ಮಂಜೂರು ಮಾಡಿದೆ. ಅವರನ್ನು 15,000 ರೂ. ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು barandbench.com ವರದಿ ಮಾಡಿದೆ.
ಕುನಾಲ್ ಕಾಮ್ರಾ ತಮ್ಮ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂದೆಯನ್ನು ವಿಶ್ವಾಸದ್ರೋಹಿ ಎಂದು ವಿಡಂಬಿಸಿದ ನಂತರ, ಅವರು ಕಾರ್ಯಕ್ರಮ ಪ್ರಸ್ತುತಪಡಿಸಿದ್ದ ಸ್ಟುಡಿಯೊವನ್ನು ಧ್ವಂಸಗೊಳಿಸಲಾಗಿತ್ತು.
ಖಾರ್ ನಲ್ಲಿರುವ ಹ್ಯಾಬಿಟ್ಯಾಟ್ ಕಾಮಿಡಿ ಕ್ಲಬ್ ನಲ್ಲಿ ಪ್ರಸ್ತುತಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆಯನ್ನು ತಾವು ವಿಡಂಬಿಸಿದ್ದ ವಿಡಿಯೊವನ್ನು ಶನಿವಾರ ಕುನಾಲ್ ಕಾಮ್ರಾ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ನಂತರ ವಿವಾದ ಭುಗಿಲೆದ್ದಿತ್ತು. ಆ ಕಾರ್ಯಕ್ರಮದಲ್ಲಿ 2022ರಲ್ಲಿ ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು, ಶಿವಸೇನೆಯ ವಿಭಜನೆಗೆ ಕಾರಣವಾಗಿದ್ದ ಶಿಂದೆಯನ್ನು ಕುನಾಲ್ ಕಾಮ್ರಾ ‘ವಿಶ್ವಾಸದ್ರೋಹಿ’ ಎಂದು ವಿಡಂಬಿಸಿದ್ದರು. ಇದೇ ವೇಳೆ ಬಾಲಿವುಡ್ ನ ಬಹು ಜನಪ್ರಿಯ ಗೀತೆಯಾದ ‘ದಿಲ್ ತೊ ಪಾಗಲ್ ಹೈ’ ನಕಲನ್ನು ಪ್ರಸ್ತುತಪಡಿಸಿದ್ದ ಕುನಾಲ್ ಕಾಮ್ರಾ, ಶಿಂದೆಯ ದೇವೇಂದ್ರ ಫಡ್ನವಿಸ್ ರೊಂದಿಗಿನ ಅವರ ಮೈತ್ರಿಯನ್ನೂ ಲೇವಡಿ ಮಾಡಿದ್ದರು.
ಆ ವಿಡಿಯೊದಲ್ಲಿ ಕುನಾಲ್ ಕಾಮ್ರಾ ಶಿಂದೆಯ ಹೆಸರನ್ನು ನೇರವಾಗಿ ಉಲ್ಲೇಖಿಸಿರದಿದ್ದರೂ, ಅವರನ್ನೇ ನೇರವಾಗಿ ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಲಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಇದರ ಮರುದಿನ (ರವಿವಾರ) ಪ್ರಮುಖ ಆರೋಪಿ ರಾಹುಲ್ ಕನಾಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದ ಶಿವಸೇನೆ (ಶಿಂದೆ ಬಣ) ಕಾರ್ಯಕರ್ತರು, ಕುನಾಲ್ ಕಾಮ್ರಾರ ಸ್ಟುಡಿಯೊವನ್ನು ಧ್ವಂಸಗೊಳಿಸಿದ್ದರು. ಈ ಸಂಬಂಧ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಕುನಾಲ್ ಕಾಮ್ರಾರ ಹೇಳಿಕೆಗಾಗಿ ಅವರ ವಿರುದ್ಧ ಒಂದು ಪ್ರಕರಣ ಹಾಗೂ ಸ್ಟುಡಿಯೊ ಧ್ವಂಸ ಘಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಶಿವಸೇನೆ (ಶಿಂದೆ ಬಣ) ಕಾರ್ಯಕರ್ತರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುನಾಲ್ ಕಾಮ್ರಾರ ಸ್ಟುಡಿಯೊ ಧ್ವಂಸ ಘಟನೆಯಲ್ಲಿ ಭಾಗಿಯಾಗಿದ್ದ 12 ಮಂದಿ ಶಿವಸೇನೆ (ಶಿಂದೆ ಬಣ) ಕಾರ್ಯಕರ್ತರನ್ನು ಸೋಮವಾರ ಬಂಧಿಸಿದ ಪೊಲೀಸರು, ನಂತರ, ಅವರನ್ನೆಲ್ಲ ನ್ಯಾಯಾಲಯದೆದುರು ಹಾಜರುಪಡಿಸಿದರು. ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ, ಅವರಿಗೆ ಜಾಮೀನು ಮಂಜೂರು ಮಾಡಲಾಯಿತು.
ಈ ಧ್ವಂಸ ಘಟನೆಯ ಸಂಬಂಧ 19 ಮಂದಿ ಆರೋಪಿಗಳನ್ನು ಪೊಲೀಸರು ಗುರುತಿಸಿದ್ದರೂ, ಇನ್ನು ಹಲವರ ಹೆಸರನ್ನು ಉಲ್ಲೇಖಿಸಲಾಗಿಲ್ಲ ಹಾಗೂ ಕೆಲವರು ತಲೆ ಮರೆಸಿಕೊಂಡಿದ್ದಾರೆ.