ಮಧ್ಯಪ್ರದೇಶ: ಇನ್ಸ್ಟಾಗ್ರಾಮ್ ನಲ್ಲಿ ಲೈವ್ ; ಪತ್ನಿ,ಅತ್ತೆಯ ಕಣ್ಣೆದುರೇ ವ್ಯಕ್ತಿ ಆತ್ಮಹತ್ಯೆ

Update: 2025-03-22 21:43 IST
ಮಧ್ಯಪ್ರದೇಶ: ಇನ್ಸ್ಟಾಗ್ರಾಮ್ ನಲ್ಲಿ ಲೈವ್ ; ಪತ್ನಿ,ಅತ್ತೆಯ ಕಣ್ಣೆದುರೇ ವ್ಯಕ್ತಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

  • whatsapp icon

ಭೋಪಾಲ್: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ 26ರ ಹರೆಯದ ವ್ಯಕ್ತಿಯೋರ್ವ ಇನ್ಸ್ಟಾಗ್ರಾಮ್ನಲ್ಲಿ ನೇರ ಪ್ರಸಾರ ಮಾಡುತ್ತಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದುರಂತವೆಂದರೆ ಈ ಲೈವ್ ಆತ್ಮಹತ್ಯೆಯನ್ನು ಆತನ ಪತ್ನಿ ಮತ್ತು ಅತ್ತೆ 44 ನಿಮಿಷಗಳ ಕಾಲ ಮೌನವಾಗಿ ವೀಕ್ಷಿಸುತ್ತಿದ್ದರು ಮತ್ತು ಆತನನ್ನು ರಕ್ಷಿಸಲು ಯಾರದೇ ನೆರವು ಕೋರಿರಲಿಲ್ಲ. ಶಿವಪ್ರಕಾಶ ತ್ರಿಪಾಠಿ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿಯಾಗಿದ್ದು,ಆತನ ಪತ್ನಿ ಪ್ರಿಯಾ ಶರ್ಮಾ ಮತ್ತು ಆಕೆಯ ತಾಯಿಯನ್ನು ಪೋಲಿಸರು ಬಂಧಿಸಿದ್ದಾರೆ.

ತ್ರಿಪಾಠಿ ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು,ಈ ಅತಿರೇಕದ ಕ್ರಮಕ್ಕೆ ಮುಂದಾಗುವ ಮುನ್ನ ಪತ್ನಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಹಲವಾರು ಸಲ ಪ್ರಯತ್ನಿಸಿದ್ದನೆನ್ನಲಾಗಿದೆ.

ತ್ರಿಪಾಠಿ ಮತ್ತು ಪ್ರಿಯಾ ಅವರ ಮದುವೆ ಎರಡು ವರ್ಷಗಳ ಹಿಂದೆ ನಡೆದಿತ್ತು. ಆರಂಭದಲ್ಲಿ ಅವರ ಸಂಬಂಧ ಚೆನ್ನಾಗಿಯೇ ಇತ್ತಾದರೂ, ಆಕೆ ಗುಟ್ಟಾಗಿ ಬೇರೆ ವ್ಯಕ್ತಿಯೊಂದಿಗೆ ಸಂವಹನ ನಡೆಸುತ್ತಿದ್ದಾಳೆ ಎನ್ನುವುದು ಕೆಲವು ತಿಂಗಳುಗಳ ಬಳಿಕ ತ್ರಿಪಾಠಿಗೆ ಗೊತ್ತಾಗಿತ್ತು. ಈ ವಿಷಯವನ್ನು ಆತ ಯಾರೊಂದಿಗೂ ಹಂಚಿಕೊಂಡಿರಲಿಲ್ಲ ಮತ್ತು ತನ್ನ ವೈವಾಹಿಕ ಜೀವನವನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದ.

ಈ ನಡುವೆ ತ್ರಿಪಾಠಿ ಅಪಘಾತಕ್ಕೀಡಾಗಿ ಊರುಗೋಲುಗಳನ್ನು ಅವಲಂಬಿಸುವಂತಾಗಿತ್ತು. ಈ ವೇಳೆ ಪ್ರಿಯಾ ತಮ್ಮ ನವಜಾತ ಶಿಶುವಿನೊಂದಿಗೆ ತಾಯಿಯ ಮನೆಗೆ ತೆರಳಿದ್ದಳು. ಆಕೆಯನ್ನು ಮರಳಿ ಕರೆತರಲು ತ್ರಿಪಾಠಿ ಹಲವಾರು ಸಲ ಅಲ್ಲಿಗೆ ಭೇಟಿ ನೀಡಿದ್ದ, ಆದರೆ ಅದಕ್ಕೆ ನಿರಾಕರಿಸಿದ್ದ ಆಕೆ ಆತನ ಮೇಲೆ ಹಲ್ಲೆಯನ್ನೂ ನಡೆಸಿದ್ದಳು ಎನ್ನಲಾಗಿದೆ.

ಘಟನೆ ನಡೆದ ದಿನ ತ್ರಿಪಾಠಿ ಮತ್ತೊಮ್ಮೆ ಪತ್ನಿಯ ಮನವೊಲಿಸಲು ಅತ್ತೆಯ ಮನೆಗೆ ಹೋಗಿದ್ದ. ಆದರೆ ಅವರು ಆತನನ್ನು ಅವಮಾನಿಸಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಹತಾಶನಾಗಿ ಮನೆಗೆ ಮರಳಿದ್ದ ತ್ರಿಪಾಠಿ ಕೋಣೆಯನ್ನು ಸೇರಿಕೊಂಡಿದ್ದ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಲೈವ್ ವೀಡಿಯೊ ಅರಂಭಿಸಿದ್ದ, ಅದು ನಡೆಯುತ್ತಿರುವಾಗಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರಿಯಾ ಇದೆಲ್ಲವನ್ನೂ 44 ನಿಮಿಷಗಳ ಕಾಲ ಮೌನವಾಗಿ ವೀಕ್ಷಿಸಿದ್ದಳು ಮತ್ತು ಯಾರಿಗೂ ತಿಳಿಸಿರಲಿಲ್ಲ.

ಘಟನೆಯ ಬಗ್ಗೆ ಕುಟುಂಬ ಸದಸ್ಯರಿಗೆ ಗೊತ್ತಾದಾಗ ಅವರು ವೀಡಿಯೊವನ್ನು ನೋಡಿ ಪೋಲಿಸರಿಗೆ ಮಾಹಿತಿ ನೀಡಿದ್ದರು.

ಪ್ರಿಯಾ ವಿವಾಹಬಾಹಿರ ಸಂಬಂಧವನ್ನು ಹೊಂದಿದ್ದಳು ಎನ್ನುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಕೌಟುಂಬಿಕ ಕಲಹಗಳು ಆತ್ಮಹತ್ಯೆಗೆ ಕಾರಣವೆಂದು ಭಾವಿಸಲಾಗಿದೆ ಎಂದು ಡಿಎಸ್ಪಿ ಉಮೇಶ್ ಪ್ರಜಾಪತಿ ತಿಳಿಸಿದರು.

ಪ್ರಿಯಾ ಮತ್ತು ಆಕೆಯ ತಾಯಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.

ತನಿಖೆಯನ್ನು ನಡೆಸುತ್ತಿರುವ ಪೋಲಿಸರು,ಇನ್ನಷ್ಟು ಸಾಕ್ಷ್ಯಾಧಾರಗಳನ್ನು ಕಲೆ ಹಾಕಲು ತ್ರಿಪಾಠಿಯ ಮೊಬೈಲ್ ಫೋನ್ ಮತ್ತು ಆತನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News