‘ಒಂದು ರಾಷ್ಟ್ರ ಒಂದು ಚುನಾವಣೆ’ ಸಮಿತಿಯ ಅವಧಿ ವಿಸ್ತರಣೆ
ಪಿ.ಪಿ.ಚೌಧುರಿ | ANI
ಹೊಸದಿಲ್ಲಿ: ಲೋಕಸಭೆ, ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಕುರಿತಾದ ಎರಡು ವಿಧೇಯಕಗಳನ್ನು ಪರಿಶೀಲಿಸುತ್ತಿರುವ ಸಂಸದೀಯ ಸಮಿತಿಯ ಅವಧಿಯನ್ನು ಮಂಗಳವಾರ ವಿಸ್ತರಿಸಲಾಗಿದೆ.
ಸಂಸತ್‌ನ ಮುಂಗಾರು ಅಧಿವೇಶನದ ಅಂತಿಮವಾರದ ಮೊದಲ ದಿನದವರೆಗೆ ಸಮಿತಿಯ ಅವಧಿಯನ್ನು ವಿಸ್ತರಿಸುವ ನಿರ್ಣಯವನ್ನು ಲೋಕಸಭೆಯು ಮಂಗಳವಾರ ಧ್ವನಿಮತದ ಮೂಲಕ ಅಂಗೀಕರಿಸಿತು. ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಪಿ.ಪಿ.ಚೌಧುರಿ ನಿರ್ಣಯವನ್ನು ಸದನದಲ್ಲಿ ಮಂಡಿಸಿದ್ದರು. ಈ ಸಮಿತಿಯಲ್ಲಿ ನೂತನ ಸದಸ್ಯರೊಬ್ಬರನ್ನು ಸೇರ್ಪಡೆಗೊಳಿಸುವ ಬಗ್ಗೆಯೂ ಲೋಕಸಭೆಯ ಮಹಾಕಾರ್ಯದರ್ಶಿ ಅವರು ಸದನಕ್ಕೆ ಮಾಹಿತಿ ನೀಡಿದರು.
ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ವಿ. ವಿಜಯಸಾಯಿ ರೆಡ್ಡಿ ರಾಜ್ಯಸಭಾಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ 39 ಸದಸ್ಯ ಬಲದ ಈ ಸಮಿತಿಯ ಒಂದು ಸ್ಥಾನ ತೆರವಾಗಿತ್ತು.
‘ ಒಂದು ರಾಷ್ಟ್ರ ಒಂದು ಚುನಾವಣೆ’ ಸಮಿತಿಯನ್ನು ಕಳೆದ ಚಳಿಗಾಲದ ಅಧಿವೇಶನದಲ್ಲಿ ರಚಿಸಲಾಗಿತ್ತು ಹಾಗೂ ಅದರ ಅವಧಿಯು ಹಾಲಿ ಅಧಿವೇಶನದ ಕೊನೆಯ ವಾರದ ಮೊದಲ ದಿನದಂದು ಮುಕ್ತಾಯಗೊಳ್ಳುವುದರಲ್ಲಿತ್ತು.
ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದ ಪ್ರಸ್ತಾವಿತ ಕಾನೂನುಗಳಿಗೆ ಸಂಬಂಧಿಸಿ ರಾಜಕೀಯ ಪಕ್ಷಗಳು ಹಾಗೂ ರಾಜ್ಯ ಸರಕಾರಗಳು ವ್ಯಾಪಕ ಸಮಾಲೋಚನೆಗಳನ್ನು ನಡೆಸಲು ದೀರ್ಘ ಸಮಯ ಬೇಕಿರುವುದರಿಂದ ಅವಧಿಯನ್ನು ವಿಸ್ತರಿಸುವ ಅಗತ್ಯವಿದೆಯೆಂದು ಸಮಿತಿಯ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದರು.