ಶಿವಸೇನೆಯನ್ನು ಮತ್ತೆ ದೂಷಿಸಿ ವೀಡಿಯೊ ಹಂಚಿಕೊಂಡ ಕಾಮಿಡಿಯನ್ ಕುನಾಲ್ ಕಾಮ್ರಾ
ಕಾಮಿಡಿಯನ್ ಕುನಾಲ್ ಕಾಮ್ರಾ (YouTube/Kunal Kamra)
ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಕುರಿತ ಹೇಳಿಕೆಗಾಗಿ ಕಾಮಿಡಿಯನ್ ಕುನಾಲ್ ಕಾಮ್ರಾ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಇದೀಗ ಶಿವಸೇನೆಯನ್ನು ಟೀಕಿಸಲು ಮತ್ತೆ ಹೊಸ ಹಾಡನ್ನು ಹಂಚಿಕೊಂಡಿದ್ದಾರೆ.
ದಿಲ್ ತೋ ಪಾಗಲ್ ಹೈ ಚಿತ್ರದ ಜನಪ್ರಿಯ ಹಿಂದಿ ಹಾಡನ್ನು ಕುನಾಲ್ ಕಾಮ್ರಾ ವಿಡಂಬನೆ ಮಾಡಿ ಏಕನಾಥ್ ಶಿಂದೆಯನ್ನು ಗದ್ದರ್(ದ್ರೋಹಿ) ಎಂದು ಉಲ್ಲೇಖಿಸಿದ ಬಳಿಕ ವಿವಾದ ಹುಟ್ಟಿಕೊಂಡಿತು. ಅವರ ಟೀಕೆಯು ಶಿಂದೆ ನೇತೃತ್ವದ ಶಿವಸೇನಾ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಆ ಬಳಿಕ ಶಿವಸೇನಾ ಕಾರ್ಯಕರ್ತರು ಮುಂಬೈನ ದಿ ಹ್ಯಾಬಿಟಾಟ್ ಕಾಮಿಡಿ ಕ್ಲಬ್ ಅನ್ನು ಧ್ವಂಸಗೊಳಿಸಿದರು.
ಹೊಸ ವೀಡಿಯೊದಲ್ಲಿ ಕಾಮ್ರಾ ಅವರು 'ಹಮ್ ಹೊಂಗೆ ಕಂಗಲ್' (ನಾವು ದಿವಾಳಿಯಾಗುತ್ತೇವೆ) ಎಂಬ ಅಣಕು ಹಾಡನ್ನು ಹಾಡಿದ್ದಾರೆ. ಶಿವಸೇನಾ ಕಾರ್ಯಕರ್ತರು ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ನಲ್ಲಿ ಹಾನಿ ಮಾಡುವ ತುಣುಕುಗಳು ವೀಡಿಯೊದಲ್ಲಿ ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿವೆ. ಈ ಹಾಡಿನ ಮೂಲಕ ಕುನಾಲ್ ಕಾಮ್ರಾ ವಿಧ್ವಂಸಕ ಕೃತ್ಯ ಮತ್ತು ಅವರು ಮಾಡಿರುವ ತಮಾಷೆಯ ಬಗ್ಗೆ ಶಿವಸೇನಾ ಪಕ್ಷದ ಪ್ರತಿಕ್ರಿಯೆಯನ್ನು ವ್ಯಂಗ್ಯವಾಗಿ ದೂಷಿಸಿದ್ದಾರೆ.