ಸ್ಟೋರ್‌ರೂಂನಲ್ಲಿ ನಾನು ಅಥವಾ ನನ್ನ ಕುಟುಂಬದ ಸದಸ್ಯರು ಯಾವುದೇ ನಗದು ಇಟ್ಟಿಲ್ಲ: ನ್ಯಾಯಮೂರ್ತಿ ಯಶವಂತ್ ವರ್ಮಾ

Photo | Supreme Court website
ಹೊಸದಿಲ್ಲಿ: ಅಗ್ನಿ ಅನಾಹುತ ಸಂಭವಿಸಿದ ವೇಳೆ ಅಧಿಕೃತ ನಿವಾಸದ ಸ್ಟೋರ್‌ರೂಂನಲ್ಲಿ ಅಪಾರ ಪ್ರಮಾಣದ ಸುಟ್ಟ ನೋಟುಗಳು ಪತ್ತೆಯಾಗಿದೆ ಎಂಬ ಆರೋಪವನ್ನು ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಬಲವಾಗಿ ನಿರಾಕರಿಸಿದರು.
ದಿಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರಿಗೆ ಬರೆದ ಸುದೀರ್ಘ ಪತ್ರದಲ್ಲಿ, ನ್ಯಾಯಮೂರ್ತಿ ವರ್ಮಾ ಅವರು ಆರೋಪವು ಆಧಾರ ರಹಿತ, ಆಪಾದಿತ ನಗದಿಗೆ ಸಂಬಂಧಿಸಿ ನನಗೆ ಮತ್ತು ನನ್ನ ಕುಟುಂಬಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಪ್ರತಿಪಾದಿಸಿದರು.
ನಾನು ಅಥವಾ ನನ್ನ ಕುಟುಂಬದ ಯಾವುದೇ ಸದಸ್ಯರು ಸ್ಟೋರ್‌ರೂಂನಲ್ಲಿ ಯಾವುದೇ ನಗದನ್ನು ಇರಿಸಿಲ್ಲ ಎಂದು ನಾನು ಹೇಳುತ್ತೇನೆ ಮತ್ತು ಆಪಾದಿತ ನಗದು ನಮಗೆ ಸೇರಿದೆ ಎಂಬ ಆರೋಪವನ್ನು ಬಲವಾಗಿ ಖಂಡಿಸುತ್ತೇನೆ ಎಂದು ಹೇಳಿದರು.
ಬಳಕೆಯಾಗದ ಪೀಠೋಪಕರಣಗಳು, ಬಾಟಲಿಗಳು, ಪಾತ್ರೆಗಳು, ಹಾಸಿಗೆಗಳು, ಬಳಸಿದ ಕಾರ್ಪೆಟ್‌ಗಳು, ಹಳೆಯ ಸ್ಪೀಕರ್‌ಗಳು, ಗಾರ್ಡನ್ ಉಪಕರಣಗಳನ್ನು ಸಂಗ್ರಹಿಸಲು ಈ ಕೊಠಡಿಯನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಈ ಕೊಠಡಿಯನ್ನು ಅನ್ಲಾಕ್ ಮಾಡಲಾಗಿತ್ತು. ಇಂತಹ ತೆರೆದ ಕೊಠಡಿಗಳಲ್ಲಿ ಯಾರಾದರೂ ಹಣವನ್ನು ಸಂಗ್ರಹಿಸಿಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಘಟನೆ ನಡೆದ ದಿನ ನಾನು ಮತ್ತು ನನ್ನ ಪತ್ನಿ ಮನೆಯಲ್ಲಿ ಇರಲಿಲ್ಲ. ಮಧ್ಯಪ್ರದೇಶಕ್ಕೆ ಪ್ರಯಾಣಿಸುತ್ತಿದ್ದೆವು. ಮನೆಯಲ್ಲಿ ನನ್ನ ಮಗಳು ಮತ್ತು ವಯಸ್ಸಾದ ತಾಯಿ ಮಾತ್ರ ಇದ್ದರು. ನಾನು 2025ರ ಮಾರ್ಚ್ 15ರಂದು ಸಂಜೆ ಭೋಪಾಲ್‌ನಿಂದ ನನ್ನ ಪತ್ನಿ ಜೊತೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಾ ದಿಲ್ಲಿಗೆ ಮರಳಿದೆ ಎಂದು ಹೇಳಿದರು.
ಮಧ್ಯರಾತ್ರಿಯಲ್ಲಿ ಬೆಂಕಿ ಕಾಣಿಸಿಕೊಂಡಾಗ, ಮಗಳು ಮತ್ತು ಖಾಸಗಿ ಕಾರ್ಯದರ್ಶಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಬೆಂಕಿ ನಂದಿಸುವ ಸಮಯದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಸಿಬ್ಬಂದಿ ಮತ್ತು ನನ್ನ ಮನೆಯ ಸದಸ್ಯರನ್ನು ಘಟನಾ ಸ್ಥಳದಿಂದ ದೂರವಿರುವಂತೆ ಸೂಚಿಸಲಾಯಿತು. ಬೆಂಕಿಯನ್ನು ನಂದಿಸಿದ ನಂತರ ಸ್ಥಳಕ್ಕೆ ಹಿಂತಿರುಗಿದಾಗ ಅಲ್ಲಿ ಯಾವುದೇ ನಗದು ಇರುವುದನ್ನು ನೋಡಿಲ್ಲ ಎಂದು ಹೇಳಿದರು.
ನನ್ನ ವಿರುದ್ಧ ದೋಷಾರೋಪಣೆ ಮತ್ತು ಮಾಧ್ಯಮಗಳಲ್ಲಿ ಮಾನಹಾನಿ ಮಾಡುವ ಮೊದಲು ಮಾಧ್ಯಮಗಳು ಕೆಲವು ವಿಚಾರಣೆಗಳನ್ನು ಅರಿತುಕೊಂಡು ವರದಿ ಮಾಡಬೇಕೆಂದು ನಾನು ಬಯಸುತ್ತೇನೆ. ಈ ಆರೋಪಗಳು ನನ್ನ ಪ್ರತಿಷ್ಠೆಗೆ ತೀವ್ರ ಧಕ್ಕೆ ತಂದಿವೆ. ನ್ಯಾಯಾಧೀಶರ ಜೀವನದಲ್ಲಿ, ಖ್ಯಾತಿ ಮತ್ತು ಚಾರಿತ್ರ್ಯಕ್ಕಿಂತ ಹೆಚ್ಚೇನೂ ಮುಖ್ಯವಲ್ಲ. ಇದು ತೀವ್ರವಾಗಿ ಕಳಂಕಿತವಾಗಿದೆ ಮತ್ತು ಸರಿಪಡಿಸಲಾಗದಷ್ಟು ಹಾನಿಯಾಗಿದೆ ಎಂದು ಅವರು ಹೇಳಿದರು.