ಖತರ್‌ನಲ್ಲಿ ದತ್ತಾಂಶ ಕಳ್ಳತನ ಆರೋಪದಲ್ಲಿ ಗುಜರಾತ್ ನಿವಾಸಿಯ ಬಂಧನ: ಪ್ರಧಾನಿ ಮಧ್ಯಸ್ಥಿಕೆಗೆ ಕುಟುಂಬಸ್ಥರ ಆಗ್ರಹ

ಅಮಿತ್ ಗುಪ್ತಾ (Photo credit: theweek.in)
ಹೊಸದಿಲ್ಲಿ: ಖತರ್‌ನಲ್ಲಿ ದತ್ತಾಂಶ ಕಳ್ಳತನ ಆರೋಪದಲ್ಲಿ ಗುಜರಾತ್‌ನ ವಡೋದರಾ ನಿವಾಸಿಯಾಗಿರುವ ಭಾರತೀಯ ಪ್ರಜೆ ಅಮಿತ್ ಗುಪ್ತಾ ಅವರನ್ನು ಬಂಧಿಸಲಾಗಿದೆ.
ಖತರ್‌ನಲ್ಲಿ ಐಟಿ ಸಂಸ್ಥೆ ಟೆಕ್ ಮಹೀಂದ್ರಾದ ಹಿರಿಯ ಉದ್ಯೋಗಿಯಾಗಿದ್ದ ಅಮಿತ್ ಗುಪ್ತಾನನ್ನು ಜನವರಿ 1ರಂದು ಖತರ್ ಅಧಿಕಾರಿಗಳು ಬಂಧಿಸಿದರು.
ಈ ಕುರಿತು ಗುಪ್ತಾ ತಾಯಿ ಪುಷ್ಪಾ ಪ್ರತಿಕ್ರಿಯಿಸಿ, ಅಮಿತ್ ಗುಪ್ತಾ ಬಂಧನದ ಬಗ್ಗೆ ಮಾಹಿತಿ ತಿಳಿದು ನಾನು ಖತರ್‌ಗೆ ಹೋಗಿ ಅಲ್ಲಿನ ಭಾರತೀಯ ರಾಯಭಾರಿಯನ್ನು ಭೇಟಿಯಾದೆ. ಆದರೆ, ಈವರೆಗೆ ಈ ಬಗ್ಗೆ ಯಾವುದೇ ಧನಾತ್ಮಕ ಪ್ರತಿಕ್ರಿಯೆ ರಾಯಭಾರಿ ಕಚೇರಿಯಿಂದ ಬಂದಿಲ್ಲ ಎಂದು ತಿಳಿಸಿದರು.
ಖತರ್ ಅಧಿಕಾರಿಗಳು ಗುಪ್ತಾ ಅವರನ್ನು ಬಂಧಿಸಿ ತನಿಖೆ ನಡೆಸುತ್ತಿರುವ ಬಗ್ಗೆ ಖತರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೂ ತಿಳಿದಿದೆ. ಗುಪ್ತಾ ನಿರಪರಾಧಿ ಮತ್ತು ಆತನ ಮೇಲೆ ತಪ್ಪಾಗಿ ದತ್ತಾಂಶ ಕಳ್ಳತನದ ಆರೋಪ ಹೊರಿಸಲಾಗಿದೆ. ಆತನನ್ನು ತುರ್ತು ಬಿಡುಗಡೆ ಮಾಡಬೇಕು. ಈ ಬಗ್ಗೆ ಪ್ರಧಾನಿ ಕಾರ್ಯಾಲಯ ತುರ್ತಾಗಿ ಮಧ್ಯಪ್ರವೇಶಿಬೇಕು ಎಂದು ಗುಪ್ತಾ ಕುಟುಂಬ ಆಗ್ರಹಿಸಿದೆ.
ಈ ಕುರಿತು ರಾಯಭಾರಿ ಕಚೇರಿಯು ಗುಪ್ತಾ ಅವರ ಕುಟುಂಬ, ಅವರನ್ನು ಪ್ರತಿನಿಧಿಸುವ ವಕೀಲರು ಮತ್ತು ಖತರ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಲಾಗಿದೆ.
ಬಿಜೆಪಿ ಸಂಸದ ಹೇಮಂಗ್ ಜೋಶಿ ಈ ಕುರಿತು ಪ್ರತಿಕ್ರಿಯಿಸಿ, ವಡೋದರಾ ನಿವಾಸಿಯಾಗಿರುವ ಗುಪ್ತಾ ಕಳೆದ 10 ವರ್ಷಗಳಿಂದ ಖತರ್‌ನಲ್ಲಿ ಟೆಕ್ ಮಹೀಂದ್ರಾದಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಖತರ್ ಭದ್ರತಾ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ಪೋಷಕರು ಖತರ್‌ಗೆ ಹೋಗಿದ್ದರು ಮತ್ತು ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಿಲ್ಲ ಎಂದು ಹೇಳಿದರು.