ಅದಿತ್ಯ ಠಾಕ್ರೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳನಬೇಕು ಎಂದು ಹೈಕೋರ್ಟ್ ಮೊರೆ ಹೋದ ದಿಶಾ ಸಾಲಿಯಾನ್ ತಂದೆ

ದಿಶಾ ಸಾಲಿಯಾನ್ |PC : X/@zayniesgal
ಮುಂಬೈ: ದಿಶಾ ಸಾಲಿಯಾನ್ ಮೃತಪಟ್ಟು ಸುಮಾರು ಐದು ವರ್ಷಗಳ ನಂತರ, ಹೈಕೋರ್ಟ್ ಮೊರೆ ಹೋಗಿರುವ ಆಕೆಯ ತಂದೆ ಸತೀಶ್ ಸಾಲಿಯಾನ್, ಪ್ರಕರಣದ ಕುರಿತು ಹೊಸದಾಗಿ ತನಿಖೆ ನಡೆಸಬೇಕು, ಶಿವಸೇನೆ (ಉದ್ಧವ್ ಬಣ) ನಾಯಕ ಆದಿತ್ಯ ಠಾಕ್ರೆ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳಬೇಕು ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಮನವಿ ಮಾಡಿದ್ದಾರೆ.
ಸತೀಶ್ ಸಾಲಿಯಾನ್ ಪರ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲ ನೀಲೇಶ್ ಸಿ. ಓಝಾ, ಈ ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ ಸರಕಾರವು ಆದಿತ್ಯ ಠಾಕ್ರೆಯನ್ನು ರಕ್ಷಿಸಲು ಹಾಗೂ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿತ್ತು ಎಂದು ಆರೋಪಿಸಿದ್ದಾರೆ.
“ದಿಶಾ ಸಾಲಿಯಾನ್ ಹತ್ಯೆಯಾದ ಸಮಯದಲ್ಲಿ ರಾಜ್ಯದಲ್ಲಿ ಉದ್ಧವ್ ಠಾಕ್ರೆ ಸರಕಾರ ಅಧಿಕಾರದಲ್ಲಿತ್ತು. ಅವರ ಪುತ್ರ ಈ ಪ್ರಕರಣದ ಆರೋಪಿಯಾಗಿದ್ದುದರಿಂದ, ಭ್ರಷ್ಟ ಪೊಲೀಸರು ಅದನ್ನು ಮುಚ್ಚಿ ಹಾಕಿದ್ದರು. ಈ ಕುರಿತಂತೆ ಎಫ್‌ಐಆರ್ ದಾಖಲಿಸಿಕೊಳ್ಳಬೇಕು ಹಾಗೂ ಕ್ರಮ ಕೈಗೊಳ್ಳಬೇಕು ಎಂದು ನಾವು ಸೆಪ್ಟೆಂಬರ್ 2023ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆವು. ಡಿಸೆಂಬರ್ 2023ರಲ್ಲಿ ಶಿಂದೆ ನೇತೃತ್ವದ ಸರಕಾರವು ಈ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಈ ಸಂಬಂಧ, ಜನವರಿ 12, 2024ರಲ್ಲಿ ಆದಿತ್ಯ ಠಾಕ್ರೆ, ಸೂರಜ್ ಪಂಚೋಲಿ ಹಾಗೂ ಇನ್ನಿತರರ ವಿರುದ್ಧ ಸಾಮೂಹಿಕ ಅತ್ಯಾಚಾರದ ಲಿಖಿತ ದೂರನ್ನು ಸಲ್ಲಿಸಲಾಗಿತ್ತು” ಎಂದು ಅವರು ಹೇಳಿದ್ದಾರೆ.
ಈ ಕುರಿತಂತೆ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿಲ್ಲ ಹಾಗೂ ಈ ಪ್ರಕರಣದಲ್ಲಿ ಸಿಬಿಐ ನನ್ನನ್ನು ಖುಲಾಸೆಗೊಳಿಸಿದೆ ಎಂದು ಆದಿತ್ಯ ಠಾಕ್ರೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
“ಆದಿತ್ಯ ಠಾಕ್ರೆ ವಿರುದ್ಧ ಯಾವುದೇ ಕ್ರಮ ಜರುಗಕೂಡದು ಎಂದು ಅನಿಲ್ ದೇಶ್ ಮುಖ್ ಬಯಸಿದ್ದರು ಎಂಬುದಕ್ಕೂ ಸಾಕ್ಷ್ಯಾಧಾರಗಳಿವೆ” ಎಂದು ವಕೀಲ ನೀಲೇಶ್ ಸಿ. ಓಝಾ ವಾದಿಸಿದ್ದಾರೆ.
ಈ ನಡೆಯಿಂದ ಮಹಾರಾಷ್ಟ್ರ ರಾಜಕಾರಣದಲ್ಲಿ ಮುಚ್ಚಿ ಹಾಕಿದ ಮತ್ತು ರಾಜಕೀಯ ಪಿತೂರಿ ನಡೆಸಿದ ಆರೋಪ ಹಾಗೂ ನ್ಯಾಯಕ್ಕಾಗಿನ ಆಗ್ರಹಗಳ ಬಿರುಗಾಳಿ ಎದ್ದಿದೆ. ಆದರೆ, ದಿಶಾ ಸಾಲಿಯಾನ್ ಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರವನ್ನು ಅಲ್ಲಗಳೆದಿರುವ ಆದಿತ್ಯ ಠಾಕ್ರೆ, ಈ ಕುರಿತು ನ್ಯಾಯಾಲಯದಲ್ಲಿ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಆದಿತ್ಯ ಠಾಕ್ರೆ, “ನನ್ನ ವರ್ಚಸ್ಸಿಗೆ ಕಳಂಕ ತರಲು ಕಳೆದ ಐದು ವರ್ಷಗಳಿಂದ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ನಾವು ನಮ್ಮ ಪರ ವಾದವನ್ನು ನ್ಯಾಯಾಲಯದೆದುರು ಮಂಡಿಸಲಿದ್ದೇವೆ. ನಾವು ನಮ್ಮ ವಿರುದ್ಧದ ಆರೋಪಗಳಿಗೆ ನ್ಯಾಯಾಲಯದಲ್ಲೇ ಉತ್ತರಿಸಲಿದ್ದೇವೆ” ಎಂದೂ ಹೇಳಿದ್ದಾರೆ.
ಈ ನಡುವೆ, ಔರಂಗಜೇಬ್ ವಿವಾದದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಶಿವಸೇನೆ (ಉದ್ಧವ್ ಬಣ) ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.
“ಈ ಅರ್ಜಿಯ ಹಿಂದಿನ ರಾಜಕೀಯದ ಕುರಿತು ಇಡೀ ರಾಜ್ಯಕ್ಕೇ ತಿಳಿದಿದೆ. ತಮಗೇ ತಿರುಗುಬಾಣವಾಗಿರುವ ಔರಂಗಜೇಬ್ ಪ್ರಕರಣವನ್ನು ಹಿಗ್ಗಿಸಲು ಈ ಜನರಿಗೆ ಸಾಧ್ಯಮವಾಗಿಲ್ಲ. ಅವರು ಔರಂಗಜೇಬ್ ಪ್ರಕರಣದಲ್ಲಿ ತಮ್ಮ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು, ದಿಶಾ ಸಾಲಿಯಾನ್ ಪ್ರಕರಣಕ್ಕೆ ಗಾಳಿ ಹಾಕುತ್ತಿದ್ದಾರೆ. ಈ ಕೊಳಕು ರಾಜಕಾರಣದಿಂದ ರಾಜ್ಯದ ಹೆಸರಿಗೆ ಧಕ್ಕೆಯಾಗುತ್ತಿದೆ. ಇದು ಉತ್ತಮವಾಗಿ ಕೆಲಸ ಮಾಡುತ್ತಿರುವ ಓರ್ವ ಯುವ ನಾಯಕ ಹಾಗೂ ನಮ್ಮ ಪಕ್ಷದ ಹೆಸರನ್ನು ಕೆಡಿಸುವ ಪ್ರಯತ್ನವಾಗಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಆದರೆ, ಈ ವಿಷಯದ ಕುರಿತು ಆಕ್ರಮಣಕಾರಿ ನಿಲುವು ತಳೆದಿರುವ ಮಹಾಯುತಿ ನಾಯಕರು, “ಆದಿತ್ಯ ಎಲ್ಲಿದ್ದಾರೆ? ಕಳೆದ ರಾತ್ರಿಯಿಂದ ಅವರೇಕೆ ಉತ್ತರಿಸುತ್ತಿಲ್ಲ? ಅವರೇಕೆ ಸಾರ್ವಜನಿಕರ ಮುಂದೆ ಬರುತ್ತಿಲ್ಲ? ನಾನು ಮೊದಲ ದಿನದಿಂದಲೂ ದಿಶಾ ಸಾಲಿಯಾನ್ ರದ್ದು ಹತ್ಯೆಯಾಗಿದ್ದು, ಈ ಕುರಿತು ತನಿಖೆ ನಡೆಯಬೇಕು ಎಂದು ಹೇಳುತ್ತಲೇ ಬಂದಿದ್ದೇನೆ. ಈ ಪ್ರಕರಣದಲ್ಲಿ ಆದಿತ್ಯ ಠಾಕ್ರೆಯ ಪಾತ್ರವನ್ನು ಪರಿಶೀಲಿಸಲೇಬೇಕಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಕುರಿತು ತನಿಖೆ ನಡೆಯಬೇಕು ಎಂದು ನಾನು ಮೊದಲಿನಿಂದಲೂ ಆಗ್ರಹಿಸುತ್ತಾ ಬಂದಿದ್ದೇನೆ” ಎಂದು ಬಿಜೆಪಿ ಸಚಿವ ನಿತೇಶ್ ರಾಣೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಶಿವ ಸೇನೆ (ಶಿಂದೆ ಬಣ) ಸಂಸದ ನರೇಶ್ ಮಹಾಸ್ಕೆ, ನಿರ್ಮಾಪಕಿ ಏಕ್ತಾ ಕಪೂರ್ ಹಾಗೂ ನಟ ಡಿನೊ ಮಾರಿಯಾರ ದೂರವಾಣಿ ಕರೆಗಳ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
“ನನ್ನ ಮೇಲೆ ಒತ್ತಡ ಹೇರಲಾಯಿತು ಹಾಗೂ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಬಚ್ಚಿಡಲಾಯಿತು ಎಂದು ದಿಶಾ ಸಾಲಿಯಾನ್ ರ ತಂದೆ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಅವರು ತಮ್ಮ ಅರ್ಜಿಯಲ್ಲಿ ನಿರ್ಮಾಪಕಿ ಏಕ್ತಾ ಕಪೂರ್, ಡಿನೊ ಮಾರಿಯಾ ಹಾಗೂ ಆದಿತ್ಯ ಪಂಚೋಲಿಯಂತಹ ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಿದ್ದು, ಅವರ ದೂರವಾಣಿ ಕರೆ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಯಲೇಬೇಕಿದೆ. ಅವರು ಯಾವುದೇ ಸುಳ್ಳು ಆರೋಪಗಳನ್ನು ಮಾಡುತ್ತಿಲ್ಲ. ಎಲ್ಲರಿಗೂ ಆದಿತ್ಯ ಠಾಕ್ರೆಯ ರಾತ್ರಿ ಸ್ನೇಹಿತರ ಗುಂಪಿನ ಬಗ್ಗೆ ತಿಳಿದೇ ಇದೆ. ಒಂದು ವೇಳೆ ಅವರು ಅಮಾಯಕರಾಗಿದ್ದರೆ, ಆದಿತ್ಯ ಠಾಕ್ರೆ ಹಾಗೂ ಸಂಜಯ್ ರಾವತ್ ತಾವೇ ಮುಂದೆ ಬಂದು ಪ್ರಕರಣದ ಕುರಿತು ತನಿಖೆಗಾಗಿ ಆಗ್ರಹಿಸಬೇಕು. ಈ ಹಿಂದೆ ಆದಿತ್ಯ ಠಾಕ್ರೆಯನ್ನು ಸಂಜಯ್ ರಾವತ್ ವಿರೋಧಿಸುತ್ತಿದ್ದರು. ಆದರೀಗ, ಆದಿತ್ಯ ಠಾಕ್ರೆ ಅವರ ಪಕ್ಷದ ಸದಸ್ಯರಾಗಿರುವುದರಿಂದ, ಸಂಜಯ್ ರಾವತ್ ಗೆ ಅವರ ವಿರುದ್ಧ ಏನೂ ಹೇಳಲಾಗುತ್ತಿಲ್ಲ” ಎಂದು ಆರೋಪಿಸಿದ್ದಾರೆ.
ಆದರೆ, ಈ ಅರ್ಜಿಗೂ, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೂ ಸಂಬಂಧವಿದೆ ಎಂದು ಮಹಾ ವಿಕಾಸ್ ಅಘಾಡಿ ನಾಯಕರು ಆರೋಪಿಸಿದ್ದಾರೆ.