ಹಿಂಸಾಚಾರ ಪೀಡಿತ ನಾಗಪುರದಲ್ಲಿ ಕರ್ಫ್ಯೂ ತೆರವು

PC : PTI
ನಾಗಪುರ: ಹಿಂಸಾಚಾರ ಪೀಡಿತ ನಾಗಪುರದ ಉಳಿದ ನಾಲ್ಕು ಪ್ರದೇಶಗಳಿಂದ ಕರ್ಪ್ಯೂ ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಮಾರ್ಚ್ 17ರಂದು ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಕೋತವಾಲಿ, ಗಣೇಶ್ಪೀಠ, ತೆಹ್ಸಿಲ್, ಲಕಡ್ಗಂಜ್, ಪಚ್ಪಾವಲಿ, ಶಾಂತಿ ನಗರ್, ಸಕ್ಕರದಾರಾ, ನಂದನ್ ವನ್, ಇಮಾಮ್ ಬಾದಾ, ಯಶೋಧರಾ ನಗರ್ ಹಾಗೂ ಕಪಿಲ್ ನಗರ್ ಪೊಲೀಸ್ ಠಾಣ ವ್ಯಾಪ್ತಿಯ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿತ್ತು.
ಮಾರ್ಚ್ 20ರಂದು ನಂದನ್ವನ್ ಹಾಗೂ ಕಪಿಲ್ ನಗರ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಿಂದ ಕರ್ಫ್ಯೂ ಹಿಂಪಡೆಯಲಾಗಿತ್ತು. ಮಾರ್ಚ್ 22ರಂದು ಪಚ್ಪಾವಲಿ, ಶಾಂತಿ ನಗರ್, ಲಕಡ್ಗಂಜ್, ಸಕ್ಕರ್ದಾರಾ ಹಾಗೂ ಇಮಾಮ್ಬಾದ್ ಪ್ರದೇಶದಿಂದ ಕರ್ಫ್ಯೂ ಹಿಂಪಡೆಯಲಾಗಿತ್ತು.
ಉಳಿದ ಕೋತವಾಲಿ, ತೆಹ್ಸಿಲ್, ಗಣೇಶ್ಪೀಠ್ ಹಾಗೂ ಯಶೋಧರಾ ನಗರ್ ಪೊಲೀಸ್ ಠಾಣಾ ಪ್ರದೇಶದಿಂದ ಅಪರಾಹ್ನ 3 ಗಂಟೆಗೆ ಕರ್ಫ್ಯೂ ಹಿಂಪಡೆಯುವಂತೆ ನಾಗಪುರ ಪೊಲೀಸ್ ಆಯುಕ್ತ ರವಿಂದರ್ ಸಿಂಗಲ್ ರವಿವಾರ ಆದೇಶಿಸಿದ್ದಾರೆ.
ಸ್ಥಳೀಯ ಪೊಲೀಸರ ನಿಯೋಜನೆಯೊಂದಿಗೆ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವಹಿಂದೂ ಪರಿಷತ್ನ ಪ್ರತಿಭಟನೆ ಸಂದರ್ಭ ಪವಿತ್ರ ಗ್ರಂಥದೊಂದಿಗೆ ಚಾದರವನ್ನು ದಹಿಸಲಾಗಿದೆ ಎಂಬ ವದಂತಿಯಿಂದ ಮಾರ್ಚ್ 17ರಂದು ನಾಗಪುರದ ವಿವಿಧ ಭಾಗಗಳಲ್ಲಿ ಕಲ್ಲು ತೂರಾಟ ಹಾಗೂ ಕಿಚ್ಚಿಡುವಿಕೆ ವರದಿಯಾಗಿತ್ತು. ಅನಂತರ ಅಧಿಕಾರಿಗಳು, ಈ ವದಂತಿ ಆಧಾರ ರಹಿತ ಎಂದು ಹೇಳಿದ್ದರು.
ಈ ಹಿಂಸಾಚಾರದಲ್ಲಿ ಡಿಸಿಪಿ ರ‍್ಯಾಂಕ್ ನ ಮೂವರು ಅಧಿಕಾರಿಗಳ ಸಹಿತ 33 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿ 100ಕ್ಕೂ ಅಧಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.