ಮಾ. 26ರಿಂದ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ರಾಷ್ಟ್ರ ವ್ಯಾಪಿ ಆಂದೋಲನ: ಎಐಎಂಪಿಎಲ್ಬಿ ಘೋಷಣೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ರವಿವಾರ ರಾಷ್ಟ್ರವ್ಯಾಪಿ ಆಂದೋಲನ ಘೋಷಿಸಿದೆ.
‘‘ಮಾರ್ಚ್ 17ರಂದು ದಿಲ್ಲಿಯಲ್ಲಿ ನಡೆದ ಬೃಹತ್ ಹಾಗೂ ಯಶಸ್ವಿ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ರಾಷ್ಟ್ರ ವ್ಯಾಪಿ ಆಂದೋಲನ ಘೋಷಿಸಿದೆ’’ ಎಂದು ಎಐಎಂಪಿಎಲ್ಬಿಯ ಕಾರ್ಯದರ್ಶಿ ಮುಹಮ್ಮದ್ ವಕೂರ್ ಉದಿನ್ ಲತೀಫಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಐಎಂಪಿಎಲ್ಬಿ ವಕ್ತಾರ ಹಾಗೂ ಕ್ರಿಯಾ ಸಮಿತಿಯ ಸಂಚಾಲಕ ಎಸ್ಕ್ಯುಆರ್ ಇಲ್ಯಾಸ್, ಮಂಡಳಿಯ ಪರವಾಗಿ ಎಲ್ಲಾ ಮುಸ್ಲಿಂ ಸಂಘಟನೆ, ನಾಗರಿಕ ಸಮಾಜ ಗುಂಪು, ದಲಿತ, ಆದಿವಾಸಿ, ಇತರ ಹಿಂದುಳಿದ ವರ್ಗದ ನಾಯಕರಿಗೆ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
‘‘ಅಲ್ಲಾನ ಕೃಪೆ ಹಾಗೂ ಈ ಗುಂಪುಗಳ ಸಂಘಟಿತ ಬೆಂಬಲ ಇಲ್ಲದೇ ಇರುತ್ತಿದ್ದರೆ ದಿಲ್ಲಿ ಪ್ರತಿಭಟನೆ ಯಶಸ್ವಿಯಾಗುತ್ತಿರಲಿಲ್ಲ’’ ಎಂದು ಅವರು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದೇ ಅಲ್ಲದೆ, ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ದೃಢವಾಗಿ ತಿರಸ್ಕರಿಸಿದ ಪ್ರತಿಪಕ್ಷಗಳು ಹಾಗೂ ಸಂಸತ್ ಸದಸ್ಯರಿಗೆ ಕೂಡ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಆಂದೋಲನದ ಮೊದಲ ಹಂತದ ಭಾಗವಾಗಿ ಮಾರ್ಚ್ 26ರಂದು ಪಾಟ್ನಾ ಮತ್ತು ಮಾರ್ಚ್ 29ರಂದು ವಿಜಯವಾಡದಲ್ಲಿ ರಾಜ್ಯ ವಿಧಾನ ಸಭೆಗಳ ಮುಂದೆ ಬೃಹತ್ ಪ್ರತಿಭಟನಾ ದರಣಿ ಯೋಜಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.