ಬಿಹಾರ | ಕನ್ಹಯ್ಯ ಕುಮಾರ್ ಭೇಟಿ ಬಳಿಕ ದೇವಾಲಯ ಸ್ವಚ್ಛತೆ !

Update: 2025-03-28 22:53 IST
ಬಿಹಾರ | ಕನ್ಹಯ್ಯ ಕುಮಾರ್ ಭೇಟಿ ಬಳಿಕ ದೇವಾಲಯ ಸ್ವಚ್ಛತೆ !

ಕನ್ಹಯ್ಯ ಕುಮಾರ್ |PC : PTI 

  • whatsapp icon

ಪಟ್ನಾ: ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಭೇಟಿಯ ನಂತರ ಬಿಹಾರದ ಸಹರ್ಸ ಜಿಲ್ಲೆಯಲ್ಲಿನ ದೇವಾಲಯವೊಂದನ್ನು ಸ್ವಚ್ಛಗೊಳಿಸಲಾಗಿದೆ ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ವಿವಾದ ಭುಗಿಲೆದ್ದಿದೆ.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ಬಿಜೆಪಿಯೇತರ ಪಕ್ಷಗಳ ಬೆಂಬಲಿಗರನ್ನು ಅಸ್ಪೃಶ್ಯ ರಂತೆ ನಡೆಸಿಕೊಳ್ಳಲಾಗುವುದೇ?” ಎಂದು ಪ್ರಶ್ನಿಸಿದೆ. ಅದಕ್ಕೆ ಪ್ರತಿಯಾಗಿ, “ಕನ್ಹಯ್ಯ ಕುಮಾರ್ ಅವರ ರಾಜಕೀಯ ಮಾದರಿಯ ನಿರಾಕರಣೆಯನ್ನು ಈ ಘಟನೆ ತೋರಿಸುತ್ತಿದೆ” ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.

ಬನಗಾಂವ್ ಗ್ರಾಮದಲ್ಲಿರುವ ದುರ್ಗಾ ದೇವಿಯ ದೇವಾಲಯದಲ್ಲಿ ಈ ಘಟನೆ ನಡೆದಿದೆ, ‘ವಲಸೆ ತಡೆಯಿರಿ, ಉದ್ಯೋಗ ನೀಡಿ’ ಯಾತ್ರೆಯ ಭಾಗವಾಗಿ ದೇವಾಲಯಕ್ಕೆ ಭೇಟಿ ನೀಡಿದ ಕನ್ಹಯ್ಯ ಕುಮಾರ್ ದೇವಾಲಯದ ಆವರಣದಲ್ಲಿ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದರು.

ಕನ್ಹಯ್ಯ ಕುಮಾರ್ ಭೇಟಿಯ ನಂತರ, ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅವರು ಗ್ರಾಮವನ್ನು ತೊರೆದ ಬಳಿಕ, ಕೆಲವು ವ್ಯಕ್ತಿಗಳು ದೇವಾಲಯವನ್ನು ಸ್ವಚ್ಛಗೊಳಿಸಿರುವುದು ವೀಡಿಯೊದಲ್ಲಿ ಕಂಡು ಬಂದಿದೆ. ಈ ಬಗ್ಗೆ ಕನ್ನಯ್ಯ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಾಂಗ್ರೆಸ್ ವಕ್ತಾರ ಗ್ಯಾನ್ ರಂಜನ್ ಗುಪ್ತ ಈ ಕುರಿತು ಪ್ರತಿಕ್ರಿಯಿಸಿ, ಕೇವಲ ಆರೆಸ್ಸೆಸ್ ಹಾಗೂ ಬಿಜೆಪಿ ಬೆಂಬಲಿಗರು ಮಾತ್ರ ಧರ್ಮಶ್ರದ್ಧೆಯುಳ್ಳವರಾಗಿದ್ದು, ಉಳಿದವರೆಲ್ಲ ಅಸ್ಪೃಶ್ಯರೇ ಎಂದು ತಿಳಿಯಲು ನಾವು ಬಯಸುತ್ತೇವೆ. ಈ ಕೃತ್ಯದಿಂದ ಪರುಶುರಾಮನ ವಂಶಸ್ಥರಿಗೆ ಅಗೌರವವಾಗಿದೆ. ನಾವೇನಾದರೂ ಬಿಜೆಪಿಯೇತರ ಪಕ್ಷಗಳು ಹಾಗೂ ಅವುಗಳ ಬೆಂಬಲಿಗರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುವ ಸಂಸ್ಕೃತೀಕರಣದ ಘಟ್ಟವನ್ನು ತಲುಪಿದ್ದೇವೆಯೆ? ಎಂದು ಪ್ರಶ್ನಿಸಿದರು.

ಈ ಮಾತಿಗೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಅಸಿತ್ ನಾಥ್ ತಿವಾರಿ, “ಪ್ರಥಮ ಘಟ್ಟದಲ್ಲಿ ಕನ್ಹಯ್ಯ ಕುಮಾರ್ ಭೇಟಿಯ ನಂತರ ದೇವಾಲಯವನ್ನು ಸ್ವಚ್ಛಗೊಳಿಸಿದ ವ್ಯಕ್ತಿಗಳು ಯಾರು ಎಂಬುದನ್ನು ನಾವು ಪತ್ತೆ ಹಚ್ಚಬೇಕಿದೆ. ಒಂದು ವೇಳೆ ಕಾಂಗ್ರೆಸ್ ನಾಯಕ ಕನ್ನಯ್ಯ ಕುಮಾರ್ ಭೇಟಿಯ ನಂತರ ದೇವಾಲಯವನ್ನೇನಾದರೂ ಸ್ವಚ್ಛಗೊಳಿಸಿದ್ದರೆ, ಅದು ಕನ್ನಯ್ಯ ಕುಮಾರ್ ರ ರಾಜಕೀಯ ಮಾದರಿಯ ನಿರಾಕರಣೆಯನ್ನು ತೋರಿಸುತ್ತದೆ” ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಬನಗಾಂವ್ ಗ್ರಾಮದ ಹಿರಿಯ ನಿವಾಸಿಯೊಬ್ಬರು, “ಸಾಮಾನ್ಯವಾಗಿ ಎಲ್ಲ ಜಾತಿ ಹಾಗೂ ಹಿನ್ನೆಲೆಯ ಸಮುದಾಯಗಳ ಜನರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಕನ್ಹಯ್ಯ ಕುಮಾರ್ ಭೇಟಿಯ ನಂತರ, ದೇವಾಲಯವನ್ನು ಸ್ವಚ್ಛಗೊಳಿಸಿರುವುದು ಕೆಲ ದುಷ್ಕರ್ಮಿಗಳ ಕೃತ್ಯವಾಗಿರುವಂತಿದೆ” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News