ರೆಸ್ಟೋರೆಂಟ್‌ಗಳು ಗ್ರಾಹಕರ ಮೇಲೆ ಸೇವಾ ಶುಲ್ಕವನ್ನು ಹೇರುವಂತಿಲ್ಲ : ದಿಲ್ಲಿ ಹೈಕೋರ್ಟ್

ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ರೆಸ್ಟೋರೆಂಟ್ಗಳು ಗ್ರಾಹಕರ ಮೇಲೆ ಸೇವಾ ಶುಲ್ಕವನ್ನು ಹೇರುವಂತಿಲ್ಲ, ಅದು ಗ್ರಾಹಕರ ಇಚ್ಛೆಗೆ ಬಿಟ್ಟ ವಿಚಾರವಾಗಿದೆ ಎಂದು ದಿಲ್ಲಿ ಹೈಕೋರ್ಟ್ ಶುಕ್ರವಾರ ಹೇಳಿದೆ.
ಹೊಟೇಲ್‌ಗಳು ಮತ್ತು ರೆಸ್ಟೋರೆಂಟ್ಗಳು ಗ್ರಾಹಕರ ಮೇಲೆ ಸೇವಾ ಶುಲ್ಕವನ್ನು ಕಡ್ಡಾಯವಾಗಿ ಹೇರುವುದನ್ನು ನಿಷೇಧಿಸಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಹೊರಡಿಸಿರುವ ಮಾರ್ಗಸೂತ್ರಗಳನ್ನು ಪ್ರಶ್ನಿಸಿ ರೆಸ್ಟೋರೆಂಟ್ ಮಾಲೀಕರ ಸಂಘಗಳು ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಎಮ್. ಸಿಂಗ್ ಈ ಆದೇಶ ಹೊರಡಿಸಿದ್ದಾರೆ.
ರೆಸ್ಟೋರೆಂಟ್ಗಳು ಗ್ರಾಹಕರಿಂದ ಕಡ್ಡಾಯವಾಗಿ ಸೇವಾ ಶುಲ್ಕ ವಸೂಲು ಮಾಡುವುದು ಗ್ರಾಹಕ ಹಕ್ಕುಗಳ ಉಲ್ಲಂಘನೆಯಾಗಿದೆ ಮತ್ತು ಕಾನೂನಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಆದರೆ, ಗ್ರಾಹಕರು ತಮ್ಮ ಸ್ವಯಂ ಇಚ್ಛೆಯಿಂದ ಸೇವಾ ಶುಲ್ಕವನ್ನು ನೀಡಬಹುದಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ರೆಸ್ಟೋರೆಂಟ್ಗಳು ತಮ್ಮ ಆಹಾರ ಬಿಲ್‌ಗಳಲ್ಲಿ ಕಡ್ಡಾಯವಾಗಿ ಸೇವಾ ಶುಲ್ಕ ವಸೂಲು ಮಾಡುವುದು ವಂಚನೆಯಾಗಿದೆ ಮತ್ತು ಜನರ ದಾರಿ ತಪ್ಪಿಸುತ್ತದೆ ಎಂದು ಹೇಳಿದ ನ್ಯಾಯಾಲಯವು, ಈ ಶುಲ್ಕವನ್ನು ಗ್ರಾಹಕರಿಂದ ಸೇವಾ ತೆರಿಗೆ ಅಥವಾ ಜಿಎಸ್ಟಿ ಎಂಬಂತೆ ವಸೂಲು ಮಾಡಲಾಗುತ್ತಿದೆ ಎಂದಿದೆ. ಇಂಥ ಪ್ರವೃತ್ತಿಯು ‘‘ಅನುಚಿತ ವ್ಯಾಪಾರ ಪದ್ಧತಿ’’ಗೆ ಅವಕಾಶ ಮಾಡಿಕೊಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮಾರ್ಗಸೂತ್ರಗಳನ್ನು ಪ್ರಶ್ನಿಸಿ ಫೆಡರೇಶನ್ ಆಫ್ ಹೊಟೇಲ್ಸ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಆಫ್ ಇಂಡಿಯಾ (ಎಫ್ಎಚ್ಆರ್ಎಐ) ಮತ್ತು ನ್ಯಾಶನಲ್ ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್ಆರ್ಎಐ) 2022ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದವು. ನ್ಯಾಯಾಲಯವು ಮಾರ್ಗಸೂತ್ರಗಳನ್ನು ಎತ್ತಿಹಿಡಿಯಿತು ಮತ್ತು ಅರ್ಜಿದಾರರಿಗೆ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತು. ದಂಡವನ್ನು ಸಿಸಿಪಿಎಯಲ್ಲಿ ಠೇವಣಿ ಇಡಬೇಕಾಗುತ್ತದೆ ಹಾಗೂ ಅದನ್ನು ಬಳಕೆದಾರರ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ.