11 ಸ್ಥಳಗಳಿಗೆ ಹಿಂದೂ, ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ಹೆಸರು ಮರು ನಾಮಕರಣ: ಉತ್ತರಾಖಂಡ ಸಿಎಂ

ಪುಷ್ಕರ್ ಸಿಂಗ್ ಧಾಮಿ | Photo : PTI
ಡೆಹ್ರಾಡೂನ್: ಹರಿದ್ವಾರ, ಡೆಹ್ರಾಡೂನ್, ನೈನಿತಾಲ್ ಹಾಗೂ ಉಧಮ್ ಸಿಂಗ್ ನಗರ ಜಿಲ್ಲೆಗಳಲ್ಲಿರುವ 11 ಸ್ಥಳಗಳ ಹೆಸರುಗಳನ್ನು ಮರು ನಾಮಕರಣ ಮಾಡಲಾಗುವುದು ಎಂದು ಸೋಮವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರಕಟಿಸಿದ್ದಾರೆ.
ಈ 11 ಸ್ಥಳಗಳ ಹೆಸರನ್ನು ಹಿಂದೂ ದೇವತೆಗಳು, ಖ್ಯಾತನಾಮರು, ಪೌರಾಣಿಕ ವ್ಯಕ್ತಿಗಳು ಹಾಗೂ ಬಿಜೆಪಿ ಮತ್ತು ಆರೆಸ್ಸೆಸ್ ನ ಪ್ರಮುಖ ನಾಯಕರ ಹೆಸರುಗಳೊಂದಿಗೆ ಮರು ನಾಮಕರಣ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
“ಸಾರ್ವಜನಿಕರ ಭಾವನೆಗಳು, ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಅನುಸಾರ ವಿವಿಧ ಸ್ಥಳಗಳ ಹೆಸರುಗಳನ್ನು ಬದಲಿಸಲಾಗುವುದು. ಅವುಗಳಿಗೆ ಭಾರತದ ಸಂಸ್ಕೃತಿಗೆ ಕೊಡುಗೆ ನೀಡಿದ ಹಾಗೂ ಅದನ್ನು ರಕ್ಷಿಸಿದ ಖ್ಯಾತ ವ್ಯಕ್ತಿಗಳ ಹೆಸರನ್ನು ಇಡಲಾಗುವುದು” ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಹರಿದ್ವಾರದಲ್ಲಿನ ಔರಂಗ್ ಜೇಬ್ ಪುರ್ ಅನ್ನು ಶಿವಾಜಿನಗರ್, ಗಾಜಿವಾಲಿಯನ್ನು ಆರ್ಯ ನಗರ್, ಚಾಂದ್ ಪುರ್ ಅನ್ನು ಜ್ಯೋತಿಬಾ ಫುಲೆ ನಗರ್, ಮುಹಮ್ಮದ್ ಪುರ್ ಜಾಟ್ ಅನ್ನು ಮೋಹನ್ ಪುರ್ ಜಾಟ್, ಖಾನ್ ಪುರ್ ಅನ್ನು ಶ್ರೀ ಕೃಷ್ಣಾಪುರ್, ಖಾನ್ ಪುರ್ ಕುರ್ಸಾಲಿಯನ್ನು ಅಂಬೇಡ್ಕರ್ ನಗರ್, ಇದ್ರಿಶ್ ಪುರ್ ಅನ್ನು ನಂದ್ ಪುರ್ ಹಾಗೂ ಅಕ್ಬರ್ ಪುರ್ ಫಜಲ್ ಪುರ್ ಅನ್ನು ವಿಜಯನಗರ್ ಎಂದು ಮರು ನಾಮಕರಣ ಮಾಡಲಾಗುತ್ತದೆ.
ಡೆಹ್ರಾಡೂನ್ ಜಿಲ್ಲೆಯಲ್ಲಿನ ಮಿಯಾನ್ ವಾಲಾವನ್ನು ರಾಮ್ಜಿವಾಲಾ, ಪೀರ್ ವಾಲಾವನ್ನು ಕೇಸರಿ ನಗರ್, ಚಾಂದ್ ಪುರ್ ಖುರ್ದ್ ಅನ್ನು ಪೃಥ್ವಿರಾಜ್ ನಗರ್ ಹಾಗೂ ಅಬ್ದುಲ್ಲಾಪುರ್ ಅನ್ನು ದಕ್ಷ್ ನಗರ್ ಎಂದು ಮರು ನಾಮಕರಣ ಮಾಡಲಾಗುತ್ತದೆ.
ಅದೇ ರೀತಿ, ನೈನಿತಾಲ್ ಜಿಲ್ಲೆಯಲ್ಲಿನ ನವಾಬಿ ರಸ್ತೆಯನ್ನು ಅಟಲ್ ಮಾರ್ಗ್ ಹಾಗೂ ಪಂಚಕ್ಕಿ-ಐಟಿಐ ಮಾರ್ಗ್ ಅನ್ನು ಗುರು ಗೋಳ್ವಾಲ್ಕರ್ ಮಾರ್ಗ್ ಎಂದು ಬದಲಿಸಲಾಗುತ್ತದೆ.
ಉಧಮ್ ಸಿಂಗ್ ನಗರ್ ಜಿಲ್ಲೆಯ ಸುಲ್ತಾನ್ ಪುರ್ ಪಟ್ಟಿಯನ್ನು ಕೌಶಲ್ಯಪುರಿ ಎಂದು ಮರು ನಾಮಕರಣ ಮಾಡಲಾಗುತ್ತದೆ.