ಈದ್ ದಿನ ರಸ್ತೆಯಲ್ಲಿ ನಮಾಝ್ ಮಾಡಿದರೆ ಪಾಸ್ ಪೋರ್ಟ್ ರದ್ದು: ಸೂಚನೆ ನೀಡಿದ ಮೀರತ್ ಪೊಲೀಸರು

PC : PTI
ಲಕ್ನೊ: ಈದ್ ದಿನ ರಸ್ತೆಗಳಲ್ಲಿ ನಮಾಝ್ ಮಾಡದಂತೆ ಮೀರತ್ ಪೊಲೀಸರು ಸೂಚಿಸಿದ್ದು, ಈ ಸೂಚನೆಯನ್ನು ಉಲ್ಲಂಘಿಸುವವರು ಕ್ರಿಮಿನಲ್ ಪ್ರಕರಣ ದಾಖಲು, ಪಾಸ್ ಪೋರ್ಟ್ ಹಾಗೂ ಪರವಾನಗಿಗಳ ರದ್ದತಿಯಂತಹ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಈ ಸೂಚನೆಗೆ ಬಿಜೆಪಿ ಮಿತ್ರ ಪಕ್ಷ ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಸಿಂಗ್ ಚೌಧರಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, “1984ರ ಆರ್ವೆಲ್ ಯುಗದ ಪೊಲೀಸ್ ಗಿರಿಯೆಡೆಗೆ!’ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಖ್ಯಾತ ಲೇಖಕ ಜಾರ್ಜ್ ಆರ್ವೆಲ್ ನ ‘ನೈಂಟೀನ್ ಎಯ್ಟಿ ಫೋರ್’ ಕೃತಿಯಲ್ಲಿನ ಪೊಲೀಸರಿಗೆ ನಿರಂಕುಶಾಧಿಕಾರ ನೀಡುವ ಚಿಂತನೆಯ ಕುರಿತು ಅವರು ಉಲ್ಲೇಖಿಸಿದ್ದಾರೆ.
ರಮಝಾನ್ ಸಂದರ್ಭದಲ್ಲಿ ರಸ್ತೆಗಳಲ್ಲಿ ನಮಾಝ್ ಮಾಡಬಾರದು ಎಂಬ ಕಳೆದ ವರ್ಷದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಬುಧವಾರ ಮೀರತ್ ಪೊಲೀಸರು ಎಂಟು ಮಂದಿಯ ಹೆಸರಿರುವ ಪಟ್ಟಿಯನ್ನು ಜಿಲ್ಲಾಧಿಕಾರಿ ವಿಜಯ್ ಕುಮಾರ್ ಸಿಂಗ್ ಅವರಿಗೆ ಸಲ್ಲಿಸಿದ್ದರು. ಇದರ ಬೆನ್ನಿಗೇ, ಆರೋಪಿಗಳ ಪರವಾನಗಿಗಳು ಹಾಗೂ ಪಾಸ್ ಪೋರ್ಟ್ ಗಳನ್ನು ರದ್ದುಗೊಳಿಸುವ ಕ್ರಮಕ್ಕೆ ಪೊಲೀಸರು ಚಾಲನೆ ನೀಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ್ದ ಮೀರತ್ ನಗರ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್, “ನಾವು ಜನರಿಗೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿ. ಇಲ್ಲವೆ, ಸೂಕ್ತ ಸಮಯಕ್ಕೆ ಈದ್ಗಾ ಮೈದಾನಗಳನ್ನು ತಲುಪಿ ಎಂದು ಮನವಿ ಮಾಡಿದ್ದೇವೆ. ಎಂಥದೇ ಪರಿಸ್ಥಿತಿಯಲ್ಲೂ ರಸ್ತೆಗಳ ಮೇಲೆ ನಮಾಝ್ ಸಲ್ಲಿಸಲು ಅವಕಾಶ ನೀಡಬಾರದು ಎಂದು ನಾವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದೇವೆ” ಎಂದು ಹೇಳಿದರು.