ಬೆಂಗಳೂರಿನಲ್ಲಿ ಇಂಡಿಯನ್ ಗ್ರ್ಯಾನ್ಪ್ರಿ 100 ಮೀ. ಓಟ: ರಾಷ್ಟ್ರೀಯ ದಾಖಲೆ ಮುರಿದ ಗುರಿಂದರ್ ವೀರ್ ಸಿಂಗ್

ಗುರಿಂದರ್ ವೀರ್ ಸಿಂಗ್ | PC : X
ಹೊಸದಿಲ್ಲಿ: ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಇಂಡಿಯನ್ ಗ್ರ್ಯಾನ್ಪ್ರಿ ಟೂರ್ನಿಯಲ್ಲಿ 10.20 ಸೆಕೆಂಡ್ನಲ್ಲಿ ಗುರಿ ತಲುಪಿದ ಗುರಿಂದರ್ವೀರ್ ಸಿಂಗ್ 100 ಮೀ. ಓಟದ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಮುರಿದು ಇತಿಹಾಸ ನಿರ್ಮಿಸಿದರು.
ಈ ಮೂಲಕ ರಿಲಯನ್ಸ್ ಪ್ರತಿನಿಧಿಸಿದ್ದ ಪಂಜಾಬ್ ಕ್ರೀಡಾಪಟು ಸಿಂಗ್ ಅವರು ಮಣಿಕಂಠ ಹೊಬಿಲ್ದಾರ್ 2023ರಲ್ಲಿ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆ(10.23 ಸೆ.)ಯನ್ನು ಮುರಿದರು. ಮಾತ್ರವಲ್ಲ ತನ್ನ ಹಿಂದಿನ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಉತ್ತಮಪಡಿಸಿಕೊಂಡರು. 2011ರಲ್ಲಿ ಸಿಂಗ್ 10.27 ಸೆಕೆಂಡ್ನಲ್ಲಿ ಗುರಿ ತಲುಪಿದ್ದರು.
ಸ್ಪರ್ಧೆಯಲ್ಲಿದ್ದ ಮಣಿಕಂಠ 10.22 ಸೆಕೆಂಡ್ನಲ್ಲಿ ಗುರಿ ತಲುಪುವ ಮೂಲಕ 2ನೇ ಸ್ಥಾನ ಪಡೆದರು. ಪುರುಷರ 100 ಮೀ. ಓಟದ ಫೈನಲ್ನಲ್ಲಿ 0.01 ಸೆಕೆಂಡ್ನಿಂದ ತನ್ನದೇ ರಾಷ್ಟ್ರೀಯ ದಾಖಲೆ ಉತ್ತಮಪಡಿಸಿಕೊಂಡರು.
ಅಮ್ಲಾನ್ ಬೊರ್ಗೊಹೈನ್(10.43 ಸೆಕೆಂಡ್)ಮೂರನೇ ಸ್ಥಾನ ಪಡೆದಿದ್ದು, 100 ಮೀ. ಓಟದಲ್ಲಿ ಮೊದಲ 3 ಸ್ಥಾನ ಪಡೆದಿರುವ ರಿಲಯನ್ಸ್ ಕಂಪೆನಿಯು ಪ್ರಾಬಲ್ಯ ಸಾಧಿಸಿತು.
ಕಳೆದ ವರ್ಷ ಪಂಚಕುಲದಲ್ಲಿ ನಡೆದಿದ್ದ 63ನೇ ಆವೃತ್ತಿಯ ಅಂತರ್-ರಾಜ್ಯ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 100 ಮೀ. ಓಟದಲ್ಲಿ 10.32 ಸೆಕೆಂಡ್ನಲ್ಲಿ ಗುರಿ ತಲುಪಿದ್ದ ಗುರಿಂದರ್ವೀರ್ ಭಾರತೀಯ ಟ್ರ್ಯಾಕ್ನಲ್ಲಿ ವೇಗದ ಓಟಗಾರನಾಗಿ ಹೊರಹೊಮ್ಮಿದ್ದರು.