ರಾಜಸ್ಥಾನ ಸಿಎಂ ಭಜನ್‌ಲಾಲ್ ಶರ್ಮಾಗೆ ಜೈಲಿನಿಂದಲೇ ಕೈದಿಯಿಂದ ಜೀವ ಬೆದರಿಕೆ

ಸಿಎಂ ಭಜನ್‌ಲಾಲ್ ಶರ್ಮಾ | PTI
ಜೈಪುರ: ಬಂಧಿತ ಕೈದಿಯೋರ್ವ ಶುಕ್ರವಾರ ಬೆಳಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಅವರಿಗೆ ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆಯೆಂದು ಜೈಪುರ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿಗೆ ಕಳೆದ 14 ತಿಂಗಳುಗಳಲ್ಲಿ ಜೀವಬೆದರಿಕೆ ಬಂದಿರುವುದು ಇದು ನಾಲ್ಕನೇ ಬಾರಿಯಾಗಿದೆ. ಕೈದಿಯು ಬಿಕಾನೇರ್ ಪೊಲೀಸ್ ನಿಯಂತ್ರಣ ಕೊಠಡಿಗೆ ಮೊಬೈಲ್ ಫೋನ್ ಮೂಲಕ ಕರೆ ಮಾಡಿ, ರಾಜಸ್ಥಾನ ಮುಖ್ಯಮಂತ್ರಿಯವರನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆಂದು ಪೊಲೀಸ್ ಅಧೀಕ್ಷಕ ಕಾವೇಂದ್ರ ಸಿಂಗ್ ಸಾಗರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ದೊರೆತ ಬಳಿಕ ಪೊಲೀಸರು ಬಿಕಾನೇರ್ ಸೆಂಟ್ರಲ್ ಜೈಲಿಗೆ ‘ಧಾವಿಸಿ ಬಂದು, ಆದಿಲ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡರು. ಬೆದರಿಕೆ ಕರೆಯ ಹಿಂದೆ ಆತನಿಗಿರುವ ಉದ್ದೇಶ ಹಾಗೂ ಆತನಿಗೆ ಹೇಗೆ ಮೊಬೈಲ್ ದೊರೆಯಿತೆಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆಯೆಂದು ಅವರು ಹೇಳಿದ್ದಾರೆ.
ಆದಿಲ್ ಮಾದಕದ್ರವ್ಯ ವ್ಯಸನಿಯಾಗಿದ್ದು, ಆತನಿಗೆ ಮಾನಸಿಕ ಸಮಸ್ಯೆಗಳಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಆತ ತನ್ನ ಕೈ ನರ ಕತ್ತರಿಸಿ ಆತ್ಮಹತ್ಯೆಗೆ ಯತ್ನಿಸಿದ್ದನೆನ್ನಲಾಗಿದೆ. ಜೈಪುರ ಪೊಲೀಸರು ಆತನಿಂದ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಬುಧವಾರದಂದು ಉಪಮುಖ್ಯಮಂತ್ರಿ ಪ್ರೇಮಚಂದ್ ಬೈರ್ವಾ ಅವರಿಗೂ ಜೈಪುರ ಕೇಂದ್ರೀಯ ಕಾರಾಗೃಹದ ಕೈದಿಯೊಬ್ಬನಿಂದ ಜೀವಬೆದರಿಕೆ ಕರೆ ಬಂದಿರುವುದಾಗಿ ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮಾರನೇ ದಿನದಂದು ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದರು.