ಭಾರತೀಯ ಬಂದರುಗಳ ಮಸೂದೆ- 2025 ಲೋಕಸಭೆಯಲ್ಲಿ ಮಂಡನೆ

Update: 2025-03-28 21:22 IST
ಭಾರತೀಯ ಬಂದರುಗಳ ಮಸೂದೆ- 2025 ಲೋಕಸಭೆಯಲ್ಲಿ ಮಂಡನೆ
  • whatsapp icon

ಹೊಸದಿಲ್ಲಿ: ಬೃಹತ್ ಬಂದರುಗಳಾಗಿ ಕೆಲವು ಬಂದರುಗಳ ವರ್ಗೀಕರಣ, ಸಮುದ್ರ ಕ್ಷೇತ್ರ ಅಭಿವೃದ್ಧಿ ಮಂಡಳಿ ಸ್ಥಾಪನೆ ಮತ್ತು ಅಂತರರಾಷ್ಟ್ರೀಯ ಬಾಧ್ಯತೆಗಳ ಅಳವಡಿಕೆಯನ್ನು ಪ್ರಸ್ತಾವಿಸಿರುವ ಮಸೂದೆಯನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.

ನೌಕಾ ಸಚಿವ ಸರ್ಬಾನಂದ ಸೋನೊವಾಲ್ ಅವರು ಮಂಡಿಸಿದ ಭಾರತೀಯ ಬಂದರುಗಳ ಮಸೂದೆ 2025,117 ವರ್ಷಗಳಷ್ಟು ಹಳೆಯದಾದ ಭಾರತೀಯ ಬಂದರುಗಳ ಕಾಯ್ದೆ 1908ನ್ನು ರದ್ದುಗೊಳಿಸುತ್ತದೆ.

ಪ್ರಸ್ತಾವಿತ ಶಾಸನವು ದೇಶೀಯ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅಂತರರಾಷ್ಟ್ರೀಯ ಬಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವ ಮತ್ತು ಅಧೀನ ಶಾಸನವನ್ನು ರಚಿಸಲು ಸಾಕಷ್ಟು ಅಧಿಕಾರವನ್ನು ನೀಡಲು ಬಯಸಿದೆ. ಜೊತೆಗೆ ಭಾರತೀಯ ಕರಾವಳಿಯನ್ನು ಸುಸಂಬದ್ಧ ಮತ್ತು ಸುಸ್ಥಿರ ರೀತಿಯಲ್ಲಿ ಬಳಸಿಕೊಳ್ಳಲು ಬಂದರುಗಳ ಅಭಿವೃದ್ಧಿಯನ್ನು ಸಮಗ್ರಗೊಳಿಸಲು ಉದ್ದೇಶಿಸಿದೆ ಎಂದು ಮಸೂದೆಯ ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸರಕಾರವು ನಿಗದಿಗೊಳಿಸಿದ ಮಾನದಂಡಗಳನ್ನು ಪೂರೈಸಿದಾಗ ಪ್ರಮುಖ ಅಥವಾ ಪ್ರಮುಖವಲ್ಲದ ಬಂದರನ್ನು ಅಧಿಸೂಚನೆಯ ಮೂಲಕ ‘ಬೃಹತ್ ಬಂದರು’ ಎಂದು ವರ್ಗೀಕರಿಸಲು ಮಸೂದೆಯು ಅವಕಾಶ ನೀಡುತ್ತದೆ.

ಕೇಂದ್ರ ಸರಕಾರದಿಂದ ಸಮುದ್ರ ಕ್ಷೇತ್ರ ಅಭಿವೃದ್ಧಿ ಮಂಡಳಿಯ ಸ್ಥಾಪನೆಯನ್ನೂ ಮಸೂದೆಯು ಪ್ರಸ್ತಾವಿಸಿದೆ. ಮಂಡಳಿಯು ಭಾರತದಲ್ಲಿನ ಬಂದರುಗಳಿಗೆ ಪರಿಣಾಮಕಾರಿ ಮತ್ತು ಪೂರಕ ಚೌಕಟ್ಟು ಸೇರಿದಂತೆ ವಿವಿಧ ಶಿಫಾರಸುಗಳನ್ನು ಮಾಡುತ್ತದೆ. ಬಂದರಿನ ಮಾಲೀಕತ್ವ ಅಥವಾ ನಿಯಂತ್ರಣದಲ್ಲಿ ಬದಲಾವಣೆಗೆ ಕೇಂದ್ರ ಸರಕಾರದ ಪೂರ್ವಾನುಮತಿಯನ್ನು ಮಸೂದೆಯು ಕಡ್ಡಾಯಗೊಳಿಸಲಿದೆ.

ಮಸೂದೆ ಮಂಡನೆಯನ್ನು ವಿರೋಧಿಸಿದ ಸಿಪಿಎಂ ಸಂಸದ ಕೆ.ರಾಧಾಕೃಷ್ಣನ್ ಅವರು,ಅದು ಬಂದರುಗಳ ಮೇಲೆ ನಿಯಂತ್ರಣದ ಕೇಂದ್ರೀಕರಣವನ್ನು ಉದ್ದೇಶಿಸಿರುವುದರಿಂದ ರಾಜ್ಯ ಸರಕಾರಗಳ ಅಧಿಕಾರವನ್ನು ಅತಿಕ್ರಮಿಸುತ್ತದೆ ಎಂದು ಹೇಳಿದರು.

1908ರಲ್ಲಿ ಭಾರತೀಯ ಬಂದರು ಕಾಯ್ದೆಯು ಜಾರಿಯಾದಾಗ ಎಲ್ಲ ಬಂದರುಗಳು ಕೇಂದ್ರದ ಅಧೀನದಲ್ಲಿದ್ದವು. ಇತ್ತೀಚಿನ ಸಮಯದಲ್ಲಿ ಹಲವಾರು ಖಾಸಗಿ ಬಂದರುಗಳು ತಲೆಯೆತ್ತಿವೆ ಮತ್ತು ಸರಕಾರಿ ಬಂದರುಗಳ ಭಾಗಗಳನ್ನು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ಹೇಳಿದ ಟಿಎಂಸಿ ಸಂಸದ ಸೌಗತ ರೇ ಅವರು, ಪ್ರಸ್ತುತ ಶಾಸನವು ಖಾಸಗಿ ಬಂದರುಗಳನ್ನು ನಿಯಂತ್ರಿಸಲು ಸಮರ್ಥವಾಗಿರುವಂತೆ ಕಂಡು ಬರುತ್ತಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News