ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಮಸೀದಿಗಳಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಹೊಸದಿಲ್ಲಿ : ರಮಝಾನ್‌ನ ಕೊನೆಯ ಶುಕ್ರವಾರದ ಜುಮಾತುಲ್ ವಿದಾ ಪ್ರಾರ್ಥನೆಯಲ್ಲಿ ಮಸೀದಿಗಳಲ್ಲಿ ಮುಸ್ಲಿಂ ಸಮುದಾಯದ ಸದಸ್ಯರು ವಕ್ಫ್ ತಿದ್ದುಪಡಿ ಮಸೂದೆ 2024ರ ವಿರುದ್ಧ ಸಾಂಕೇತಿಕವಾಗಿ ಕೈಗಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(AIMPLB) ವಕ್ಫ್ ತಿದ್ದುಪಡಿ ಮಸೂದೆ- 2024ರ ವಿರುದ್ಧ ರಮಝಾನ್ನ ಕೊನೆಯ ಶುಕ್ರವಾರ ಕೈಗೆ ಕಪ್ಪು ಪಟ್ಟಿಯನ್ನು ಧರಿಸಿ ಪ್ರತಿಭಟನೆ ನಡೆಸುವಂತೆ ದೇಶಾದ್ಯಂತ ಮುಸ್ಲಿಮರಿಗೆ ಕರೆ ನೀಡಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ದೇಶದ ವಿವಿಧ ಭಾಗಗಳಲ್ಲಿ ಜನರು ಕೈಗೆ ಕಪ್ಪು ಪಟ್ಟಿ ಧರಿಸಿ ವಕ್ಪ್ ಮಸೂದೆಗೆ ವಿರೋಧವನ್ನು ವ್ಯಕ್ತಪಡಿಸಿದರು.
ಹೈದರಾಬಾದ್‌ನ ಮೆಕ್ಕಾ ಮಸೀದಿಗೆ ನಮಾಝ್‌ಗೆ ತೆರಳುವಾಗ ಜನರು ಕೈಗೆ ಕಪ್ಪು ಪಟ್ಟಿಯನ್ನು ಧರಿಸಿರುವುದು ಕಂಡು ಬಂದಿದೆ. ಅದೇ ರೀತಿ ನಗರದ ಸಣ್ಣ ಸಣ್ಣ ಮಸೀದಿಗಳಿಗೆ ತೆರಳುವವರು ಕೂಡ ಕಪ್ಪು ಪಟ್ಟಿಗಳನ್ನು ಧರಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಎಐಎಂಪಿಎಲ್‌ಬಿ ಪ್ರಧಾನ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ರಹೀಮ್ ಮುಜದ್ದಿದಿ ಅವರು ಈ ಕುರಿತು ಮಂಡಳಿಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಜನರು ಪ್ರಾರ್ಥನೆಗೆ ಹೋಗುವಾಗ ತಮ್ಮ ಬಲಗೈಗೆ ಕಪ್ಪು ಪಟ್ಟಿಯನ್ನು ಧರಿಸುವಂತೆ ಆಗ್ರಹಿಸಿದ್ದರು.
ಎಐಎಂಪಿಎಲ್‌ಬಿ ಪ್ರತಿಭಟನೆ ಕರೆಯ ಹಿನ್ನೆಲೆ ದೇಶದಾದ್ಯಂತ ಜನರು ಕೈಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ರಮಝಾನ್‌ನ ಕೊನೆಯ ಶುಕ್ರವಾರದ ನಮಾಝ್‌ಗೆ ತೆರಳಿದರು. ವಕ್ಫ್ ಮಸೂದೆ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.