ಪ. ಬಂಗಾಳ ಹೊರತುಪಡಿಸಿ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಆಯುಶ್ಮಾನ್ ಭಾರತ್ ಯೋಜನೆಗೆ ಸೇರ್ಪಡೆ: ಸಚಿವ ಜೆ.ಪಿ. ನಡ್ಡಾ

Update: 2025-03-28 21:08 IST
J P Nadda

ಜೆ.ಪಿ. ನಡ್ಡಾ | PTI 

  • whatsapp icon

ಹೊಸದಿಲ್ಲಿ: ಮಾರ್ಚ್ 26ರ ವೇಳೆಗೆ, ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಯುಶ್ಮಾನ್ ‘ಭಾರತ್- ಪ್ರ‘ಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ ಸೇರ್ಪಡೆಗೊಂಡಿವೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಶುಕ್ರವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ಯೋಜನೆಯ ಆರಂಭದಿಂದ 2025 ಮಾರ್ಚ್ 1ರವರೆಗೆ ಈ ಯೋಜನೆಯ ಅಡಿಯಲ್ಲಿ 8.9 ಕೋಟಿ ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಮತ್ತು ಈ ಸಂಬಂದ ಸರಕಾರ 1.26 ಲಕ್ಷ ಕೋಟಿ ರೂಪಾಯಿ ಪಾವತಿಸಿದೆ ಎಂದು ನಡ್ಡಾ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಾರ್ಚ್ 20ರ ವೇಳೆಗೆ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಅಂಗನವಾಡಿ ಸಹಾಯಕರ ಕುಟುಂಬಗಳಿಗೆ ಕ್ರಮವಾಗಿ 10.21 ಲಕ್ಷ, 14.47 ಲಕ್ಷ ಮತ್ತು 14.76 ಲಕ್ಷ ಆಯಶ್ಮಾನ್ ಕಾರ್ಡ್ಗಳನ್ನು ವಿತರಿಸಲಾಗಿದೆ ಎಂದು ಅವರು ನುಡಿದರು.

ಮಾರ್ಚ್ ಒಂದರ ವೇಳೆಗೆ, ಆಯುಶ್ಮಾನ್ ‘ಭಾರತ್ ಯೋಜನೆಯ ವ್ಯಾಪ್ತಿಗೆ 13,866 ಖಾಸಗಿ ಮತ್ತು 17,091 ಸರಕಾರಿ ಆಸ್ಪತ್ರೆಗಳು ಸೇರಿದಂತೆ 30,957 ಆಸ್ಪತ್ರೆಗಳನ್ನು ತರಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದರು.

2024-25ರ ಆರ್ಥಿಕ ವರ್ಷದಲ್ಲಿ, ಮಾರ್ಚ್ 1ರವರೆಗೆ ಈ ಯೋಜನೆಯಡಿ 2.21 ಕೋಟಿ ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, 34,954 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದರು.

ಫಲಾನುಭವಿಗಳ ಚೌಕಟ್ಟು ವಿಸ್ತರಣೆ, ಹೊಸ ವಿದಿವಿಧಾನಗಳ ಸೇರ್ಪಡೆ, ನೂತನ ಆಸ್ಪತ್ರೆಗಳ ಸೇರ್ಪಡೆ ಮತ್ತು ಇತರ ಸುಧಾರಣೆಗಳು ಸೇರಿದಂತೆ ಅಗತ್ಯಕ್ಕೆ ಅನುಗುಣವಾಗಿ ಕಾಲ ಕಾಲಕ್ಕೆ ನಿಯಮಿತ ಬದಲಾವಣೆಗಳನ್ನು ಯೋಜನೆಗೆ ತರಲಾಗಿದೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News