ಜಿ20 ಶೃಂಗ ಸಭೆ, ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಸೈಬರ್ ದಾಳಿಯಲ್ಲಿ ಹೆಚ್ಚಳ : ಸಚಿವ ಅಶ್ವಿನಿ ವೈಷ್ಣವ್

ಅಶ್ವಿನಿ ವೈಷ್ಣವ್ | PC : PTI
ಹೊಸದಿಲ್ಲಿ: ಸೈಬರ್ ದಾಳಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಸಮಗ್ರ ತಾಂತ್ರಿಕ ಮತ್ತು ಕಾನೂನು ಕ್ರಮಗಳನ್ನು ಸರಕಾರ ತೆಗೆದುಕೊಂಡಿದೆ ಎಂದು ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ರಾಜ್ಯಸಭೆಗೆ ತಿಳಿಸಿದರು. ಅದೇ ವೇಳೆ, ಜಿ20 ಶೃಂಗಸಭೆ ಮತ್ತು ರಾಮ ಮಂದಿರ ಉದ್ಘಾಟನಾ ಸಮಾರಂಭದ ವೇಳೆ ಬೃಹತ್ ಸೈಬರ್ ದಾಳಿಗಳನ್ನು ನಡೆಸಲಾಗಿದ್ದು ಅವುಗಳನ್ನು ನಿವಾರಿಸುವಲ್ಲಿ ‘ಭಾರತ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಸೈಬರ್ ದಾಳಿಯ ಸವಾಲಿನೊಂದಿಗೆ ವ್ಯವಹರಿಸುವ ನಿಟ್ಟಿನಲ್ಲಿ ಸರಕಾರವು ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ. ಸೈಬರ್ದಾಳಿಗಳು ನಮಗೆ ದೊಡ್ಡ ಸವಾಲಾಗಿವೆ’ ಎಂದು ಹೇಳಿದರು.
ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಆಗಿರುವ ಗಣನೀಯ ಏರಿಕೆಯ ಬಗ್ಗೆ ಬಿಜು ಜನತಾ ದಳ (ಬಿಜೆಡಿ)ದ ನಿರಂಜನ್ ಬಿಶಿ ಸದನದಲ್ಲಿ ಕಳವಳ ವ್ಯಕ್ತಪಡಿಸಿದರು. ಜನರ ಉಳಿತಾಯದ ಹಣಕ್ಕೆ ಎದುರಾಗಿರುವ ಗಂಭೀರ ಬೆದರಿಕೆಯ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಸೈಬರ್ ದಾಳಿಗಳು ಹೆಚ್ಚುತ್ತಿವೆ ಮತ್ತು 30 ಲಕ್ಷಕ್ಕೂ ಅಧಿಕ ಬ್ಯಾಂಕ್ ಗ್ರಾಹಕರು ಇದಕ್ಕೆ ಬಲಿಯಾಗಿದ್ದಾರೆ ಹಾಗೂ ಅವರಿಗೆ 28,000 ಕೋಟಿ ರೂ.ಗೂ ಅಧಿಕ ಮೊತ್ತವನ್ನು ವಂಚಿಸಲಾಗಿದೆ ಎಂದು ನಿರಂಜನ್ ಬಿಶಿ ಹೇಳಿದರು.